ವಿಜಯಪುರ: ದೇವರ ಹಿಪ್ಪರಗಿ ಮತಕ್ಷೇತ್ರದ ನಾನಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಚಿಮ್ಮಲಗಿ ಏತ ನೀರಾರವಿ ಯೋಜನೆಯ ನಾಗಠಾಣ ಉಪಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸುವಂತೆ ಕೆಬಿಜೆಎನ್ಎಲ್ ಆಲಮಟ್ಟಿ ಮತ್ತು ರಾಂಪೂರ ವಿಭಾಗದ ಅಧಿಕಾರಿಗಳಿಗೆ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ನೇತೃತ್ವದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ನಾನಾ ಗ್ರಾಮಸ್ಥರು ವಿಜಯಪುರದಲ್ಲಿ ಸುನೀಲಗೌಡ ಪಾಟೀಲ ಅವರನ್ನು ಇಂದು ಬುಧವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ದೇವರ ಹಿಪ್ಪರಗಿ, ಹರನಾಳ, ಇಂಗಳಗಿ,ಮುಳಸಾವಲಗಿ, ಕಡ್ಲೇವಾಡ ಪಿ.ಸಿಎಚ್. ಚಿಕ್ಕರೂಗಿ, ಗಂಗನಳ್ಳಿ, ನಿವಾಳಖೇಡ, ಅಂಕಲಗಿ, ಜಂಬಗಿ ಮುಂತಾದ ಗ್ರಾಮಗಳ ಕೆರೆಗಳಿಗೆ ನೀರು ಹರಿಸಬೇಕು. ಇದರಿಂದ ನಮ್ಮ ಭಾಗದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ, ಅಜೀಜ್ ಯಲಗಾರ ಹಾಗೂ ಶಂಕರಗೌಡ ಕೋಟಿಖಾನೆ ಅವರು, ಎಂ. ಬಿ. ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಾಡಿರುವ ನೀರಾವರಿ ಯೋಜನೆಯಿಂದಾಗಿ ನಮ್ಮ ಭಾಗದ ರೈತರು ಗುಳೆ ಹೋಗುವುದು ತಪ್ಪಿದೆ. ಈ ಬಾರಿ ಬರ ಮತ್ತು ಕೆರೆಗಳಿಗೆ ನೀರು ಹರಿಸದ ಕಾರಣ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸದಿದ್ದರೆ ಮತ್ತೆ ನಾವು ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದು ಅಳಲು ತೋಡಿಕೊಂಡರು.
ಆಗ ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿದ ಸುನೀಲಗೌಡ ಪಾಟೀಲ ಅವರು, ಕೆಬಿಜೆಎನ್ಎಲ್ ಆಲಮಟ್ಟಿ ಮತ್ತು ರಾಂಪೂರ ವಿಭಾಗದ ಹಿರಿಯ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಹುಲ್ಲೂರಿನಿಂದ ಜಾಲವಾದ ವೈ ಜಂಕ್ಷನ್ ವರಗೆ ನೀರು ಹರಿಸಬೇಕು. ಅಲ್ಲಿಂದ ಈ ನೀರು ನಾಗಠಾಣ ಕಾಲುವೆ ಮತ್ತು ಕೋರವಾರ ಕಾಲುವೆಗಳಿಗೆ ಹರಿಸುವುದರಿಂದ ಈ ಎರಡೂ ಕಾಲುವೆಗಳ ಭಾಗದ ನಾನಾ ಗ್ರಾಮಗಳ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೇ, ನೀರು ಹರಿಸಲು ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ ಕೂಡಲೆ ಬಗೆಹರಿಸಿ ತಕ್ಷಣ ಕೆರೆಗಳಿಗೆ ನೀರು ಹರಿಸುವಂತೆ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಾನಾ ರೈತ ಮುಖಂಡರಾದ ಬಸೀರ ಅಹ್ಮದ ಬೇಪಾರಿ, ಶ್ರಿಮಂತ ತಳವಾರ, ರೇವಣಯ್ಯ ಮಠ, ಸಾಹೇಬಗೌಡ ರೆಡ್ಡಿ, ಶಾಂತಗೌಡ ಕೊಣ್ಣೂರ, ಶ್ರೀಪತಿ ದಳವಾಯಿ, ಮಹಾದೇವಪ್ಪ ನಾಟೀಕಾರ, ನಿಂಗಣ್ಣ ಬಿರಾದಾರ, ಎ. ಎಂ. ಬಾಗವಾನ, ಡಾ. ಗುರುರಾಜ ಗಡೇದ, ಮುರ್ತುಜ ತಾಂಬೋಳಿ ಮುಂತಾದವರು ಉಪಸ್ಥಿತರಿದ್ದರು.