ವಿಜಯಪುರ: ತೀವ್ರ ಬರ ಪೀಡಿತ ವಿಜಯಪುರ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದಾರೆ.
ಸಚಿವರು ಸಧ್ಯಕ್ಕೆ ವಿದೇಶ ಪ್ರವಾಸದಲ್ಲಿದ್ದು, ಅವರ ಸೂಚನೆಯಂತೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಸಚಿವರ ಕಚೇರಿಯ ಅಧಿಕಾರಿಗಳಾದ ಎಂ. ಎನ್. ಚೋರಗಸ್ತಿ ಮತ್ತು ದಶರಥ ಭೋಸಲೆ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಚಿವರ ಪರವಾಗಿ ಅರ್ಜುಣಗಿ ಗ್ರಾಮದಲ್ಲಿ ಮನವಿ ಪತ್ರ ಸಲ್ಲಿಸಿದರು.
ಮಳೆಯ ಕೊರತೆಯಿಂದಾಗಿ ತೀವ್ರ ಕೊಳವೆ ಬಾವಿ, ತೆರೆದ ಬಾವಿಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಉಂಟಾಗಬಹುದಾಗಿದೆ. ಮಳೆಯ ಅಭಾವದಿಂದ ರೈತರು ಜಮೀನಿನಲ್ಲಿ ಹಾಕಿರುವ ದುಡಿಮೆ ಹಾಗೂ ಬಂಡವಾಳ ಸಹ ಕೈಗೆ ಬರದೇ ಇರುವ ಪರಿಸ್ಥಿತಿಯಲ್ಲಿ ರೈತ ತೀವ್ರ ಸಂಕಷ್ಟ ಸ್ಥಿತಿಯಲ್ಲಿದ್ದು, ಸರ್ಕಾರವು ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ವ್ಯಾಪಾರಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ನೀಡಿರುವ ನೈಜ ವರದಿಯನ್ನಾಧರಿಸಿ ಸಮೀಕ್ಷೆಯಲ್ಲಿ ಕಂಡು ಬಂದಿರುವ ಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿ ಮಾಡಿ, ವಿಜಯಪುರ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬರ ಪರಿಹಾರ ಅನುದಾನ ಒದಗಿಸಲು ಪ್ರಯತ್ನಿಸುವಂತೆ ಸಚಿವರು ಅವರು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 10,53,471 ಹೆಕ್ಟೇರ್ ಪ್ರದೇಶವಿದ್ದು, ಇದರಲ್ಲಿ 9,72,318 ಹೆಕ್ಟೇರ್ ಪ್ರದೇಶ ಸಾಗುವಳಿ ಕ್ಷೇತ್ರವಾಗಿದೆ. ಇದರಲ್ಲಿ 6,49,940 ಹೆಕ್ಠೆರ್ ಪ್ರದೇಶ ಸಾಮಾನ್ಯ ಮುಂಗಾರಿನ ಕ್ಷೇತ್ರ, 3,45,922 ಹೆಕ್ಟೇರ್ ಸಾಮಾನ್ಯ ಹಿಂಗಾರಿನ ಕ್ಷೇತ್ರವಾಗಿದ್ದು, 3,09,811 ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿಗೊಳಪಟ್ಟಿದೆ. ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಶೇ.60ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ಪ್ರದೇಶದಲ್ಲಿ ಮಳೆ ಹಾಗೂ ತೇವಾಂಶದ ಕೊರತೆಯಿಂದ ಬೆಳೆಗಳು ಒಣಗಿಹೋಗಿವೆ.
2023ರ ಮೇ ತಿಂಗಳಿನಿಂದ ಅಕ್ಟೋಬರ್ ಮೊದಲ ವಾರದವರೆಗೆ ಮಳೆಮಾಪನ ವರದಿ ಅವಲೋಕನ ಮಾಡಲಾಗಿ ಅತಿ ಕಡಿಮೆ ಮಳೆಯಾಗಿರುವುದು ದಾಖಲಾಗಿದೆ. 13 ತಾಲೂಕುಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ 12 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ದುರ್ದೈವಶಾತ ಕೇವಲ ಒಂದು ದಿನ ತಿಕೋಟಾ ಹೋಬಳಿಯಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಮಳೆಮಾಪನ ವರದಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ತೋರಿಸಿರಿವು ಹಿನ್ನಲೆಯಲ್ಲಿ ತಿಕೋಟಾ ತಾಲೂಕನ್ನು ಬರಪೀಡಿತ ಘೋಷಿಸುವುದನ್ನು ಕೈಬಿಡಲಾಗಿದೆ.
ವಾಸ್ತವದಲ್ಲಿ ತಿಕೋಟಾ ತಾಲೂಕಿನಲ್ಲಿಯೂ ಸಹ ಸಮಯಕ್ಕೆ ಸರಿಯಾಗಿ ಮಳೆಯಾಗದೇ ಇರುವುದರಿಂದ ಟ್ಯಾಂಕರ್ ಮೂಲಕ ನೀರು ಪಡೆದು ತಾಲೂಕಿನ ತೋಟಗಾರಿಕೆ ಬೆಳೆ ರಕ್ಷಿಸಲಾಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಮಳೆಯ ಕೊರತೆಯಿಂದ ಕೊಳವೆ ಬಾವಿ, ಅಂತರ್ಜಲ ಮಟ್ಟ ಕುಸಿದು, ತೀವ್ರ ಸಂಕಷ್ಟಕೊಳಗಾಗಿರುವುದರಿಂದ ತಿಕೋಟಾ ತಾಲೂಕನ್ನು ಸಹ ತೀವ್ರ ಬರಪೀಡಿತ ತಾಲೂಕು ಘೋಷಣೆಗೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪತ್ರ ಬರೆದು ವರದಿ ಸಲ್ಲಿಸಿದ್ದಾರೆ. ಅದರಂತೆ ನಾನೂ ಸಹ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಕಂದಾಯ ಸಚಿವರಿಗೆ ಪತ್ರ ಬರೆದು ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕವೆಂದು ಘೋಷಿಸಲು ಮನವಿ ಮಾಡಿಕೊಂಡಿದ್ದು, ವಾಸ್ತವಾಂಶದ ವರದಿಯನ್ನು ಪಡೆದುಕೊಂಡು ತಿಕೋಟಾ ತಾಲೂಕನ್ನು ಸಹ ಬರಪೀಡಿತ ತಾಲೂಕುವೆಂದು ಪರಿಗಣಿಸಿ ಬರಪೀಡಿತ ತಾಲೂಕು ಎಂದು ಘೋಷಿಸಿ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ನೀಡಲು ವರದಿ ನೀಡುವಂತೆ ಸಚಿವ ಎಂ. ಬಿ. ಪಾಟೀಲ ಅವರು ಕೇಂದ್ರ ಬರ ಅಧ್ಯಯನ ತಂಡಕ್ಕೆ ನೀಡಿರುವ ಅವರು ಮನವಿ ಪತ್ರದಲ್ಲಿ ಕೋರಿದ್ದಾರೆ.