ವಿಜಯಪುರ ಡಿಎಚ್ಓ ಕಚೇರಿ, ಜಿಲ್ಲಾಸ್ಪತ್ರೆಗೆ ಡಿಸಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಾಹುಲ ಶಿಂಧೆ ದಿಢೀರ ಭೇಟಿ- ವ್ಯವಸ್ಥೆ ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಕಾರ್ಯವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಬೆಳಿಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಕಲ್ಪಿಸಲಾಗುತ್ತಿರುವ ವೈದ್ಯೋಪಚಾರ ಕುರಿತು ರೋಗಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಸಿಬ್ಬಂದಿಗಳ ಹಾಜರಾತಿಯನ್ನು ವೀಕ್ಷಣೆ ನಡೆಸಿ, ತಡವಾಗಿ ಬಂದ ಸಿಬ್ಬಂದಿಗಳ ಹಾಜರಾತಿಯನ್ನು ಗೈರುಹಾಜರಿ ಎಂದು ಪರಿಗಣಿಸಿ ಅಂತಹ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ವಿಜಯಪುರ ಡಿಸಿ ಟಿ. ಭೂಬಾಲನ, ಜಿ. ಪಿ. ಸಿಇಓ ರಾಹುಲ ಶಿಂಧೆ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಅಲ್ಲಿನ ಸಿಬ್ಬಂದಿಯವರಿಗೆ ಶಿಸ್ತು ಹಾಗೂ ಸಮಯ ಪಾಲನೆ ಮಾಡುವಂತೆ ಸೂಚಿಸಿದ ಅವರು, ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಉತ್ತಮ ವೈದ್ಯಕೀಯ ಉಪಚಾರ ನೀಡಬೇಕು. ಎಲ್ಲ ವಿಭಾಗಗಳಲ್ಲಿ ಹಾಗೂ ವಾರ್ಡಗಳಲ್ಲಿ ಯಾವುದೇ ತರಹದ ದೂರುಗಳಿಗೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು, ಕಚೇರಿಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ ಸಾಮಗ್ರಿಗಳನ್ನು ತಕ್ಷಣ ತೆರವುಗೊಳಿಸಬೇಕು. ಜಿಲ್ಲಾ ಮನೋರೋಗ ಘಟಕ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಹಳೆಯದಾಗಿರುವುದರಿಂದ
ಈ ಘಟಕವನ್ನು ಅಡಕಿಗಲ್ಲಿಯಲ್ಲಿರುವ ಆಯುಷ್ ಇಲಾಖೆಯ ಕಟ್ಟಡದಲ್ಲಿ ಸ್ಥಳಾಂತರಿಸಲು ಕ್ರಮ ವಹಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕಿಗೆ ಭೇಟಿ ನೀಡಿದ ಅವರು, 500 ಯೂನಿಟ್ ಸಂಗ್ರಹಣೆಯ ಸಾಮರ್ಥ್ಯವನ್ನು ಹೊಂದಿದೆ. ಬ್ಲಡ್ ಬ್ಯಾಂಕ್‍ನಲ್ಲಿ ಕಡಿಮೆ ಬ್ಲಡ್ ಸಂಗ್ರಹ ಮಾಡಿರುವುದನ್ನು ಗಮನಿಸಿ, ಹೆಚ್ಚೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಚ್ಚಿನ ಸಂಗ್ರಹ ಮಾಡಬೇಕು ಹಾಗೂ ನಿರುಪಯುಕ್ತ ವಾಹನಗಳ ವಿಲೇವಾರಿಗೆ ಅವರು ಸೂಚನೆ ನೀಡಿದರು.

ಜಿಲ್ಲಾ ಆಯುಷ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಹಾಜರಾತಿ ಪರಿಶೀಲನೆ ನಡೆಸಿದರು.ಸ್ವಚ್ಛತೆಗೆ ಆದ್ಯತೆ ನೀಡುವಂತೆ ಡಾ. ಆರ್ ಎಸ್.ಪಾಟೀಲ್ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ,ಡಾ.ಆರ್ ಸಿ ಎಚ್ ಕೆ.ಡಿ.ಗುಂಡಬಾವಡಿ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಕವಿತಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌