ವಿಜಯಪುರ: 2023 ನೇ ವರ್ಷದ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ನಗರದ ಬಿ.ಎಲ್. ಡಿ. ಇ. ವಿಶ್ವವಿದ್ಯಾಲಯದ ಮೂರು ಜನ ಸಂಶೋಧಕರನ್ನು ಆಯ್ಕೆ ಮಾಡಲಾಗಿದೆ.
ವಿಜಯಪುರದ ಬಿ. ಎಲ್. ಡಿ. ಇ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಡಾ. ಕುಸಾಲ ದಾಸ ಹಾಗೂ ಡಾ. ರಘು ಎ. ವಿ. ಅಇವರಿಗೆ ಔಷಧ ವಿಜ್ಞಾನ, ಶರೀರ ಶಾಸ್ತ್ರ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ 2023 ನೇ ವರ್ಷದ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.
ಅಮೇರಿಕಾದ ಸ್ಟ್ಯಾನಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರಲ್ಯಾಂಡಿನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ. ಡಾ. ರಾಘವೇಂದ್ರ ಕುಲಕರ್ಣಿ ಅವರು ಸತತ 3 ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 15 ನೇ ಸ್ಥಾನ ಹಾಗೂ ವಿಶ್ವದ 127 ನೇ ಸ್ಥಾನ ಪಡೆದಿದ್ದಾರೆ. ಡಾ. ರಾಘವೇಂದ್ರ ಕುಲಕರ್ಣಿ ಅವರು 121 ಸಂಶೋಧನಾ ಪ್ರಕಟನೆಗಳನ್ನು ರಚಿಸಿದ್ದಾರೆ. ಅಲ್ಲದೇ, 9 ಪೇಟೆಂಟ್ ಗಳನ್ನೂ ಪಡೆದಿದ್ದಾರೆ. ಅಷ್ಟೇ ಅಲ್ಲ, ಇವರು ಸಂಶೋಧನೆಗಾಗಿ ರೂ. 97 ಲಕ್ಷ ಅನುದಾನವನ್ನೂ ಪಡೆದುಕೊಂಡಿದ್ದಾರೆ.
ಡಾ. ಕುಸಾಲ ದಾಸ ಅವರು ಶರೀರ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 186 ನೇ ಸ್ಥಾನ ಹಾಗೂ ವಿಶ್ವದಲ್ಲಿ 2407 ನೇ ಸ್ಥಾನ ಪಡೆದಿದ್ದಾರೆ. ಅವರು 135 ಸಂಶೋಧನಾ ಪ್ರಕಟನೆಗಳನ್ನು ರಚಿಸಿದ್ದಾರೆ. ಅಲ್ಲದೇ, 2 ಪೇಟೆಂಟ್ ಗಳನ್ನು ಪಡೆದಿದ್ದು, ಸಂಶೋಧನೆಗಾಗಿ ರೂ. 60 ಲಕ್ಷ ಅನುದಾನವನ್ನೂ ಪಡೆದುಕೊಂಡಿದ್ದಾರೆ.
ಡಾ. ರಘು ಎ. ವಿ. ಅವರು ಪಾಲಿಮರ್- ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 20 ನೇ ಸ್ಥಾನ ಹಾಗೂ ವಿಶ್ವದ 326 ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ, 110 ಸಂಶೋಧನಾ ಪ್ರಕಟನೆಗಳನ್ನು ರಚಿಸಿದ್ದಾರೆ ಹಾಗೂ ಸಂಶೋಧನೆಗಾಗಿ ರೂ. 25 ಲಕ್ಷ ಅನುದಾನವನ್ನೂ ಪಡೆದುಕೊಂಡಿದ್ದಾರೆ. ಅವರು ಕರ್ನಾಟಕ ಸರಕಾರದ ಸರ್ ಸಿ. ವಿ. ರಾಮನ್ ಪ್ರಶಸ್ತಿ ಯನ್ನೂ ಪಡೆದುಕೊಂಡಿದ್ದಾರೆ.
ಇವರ ಸಾಧನೆಗೆ ಬಿ.ಎಲ್. ಡಿ. ಇ. ವಿಶ್ವವಿದ್ಯಾಲಯದ ಕುಲಾಧಿಪತಿ ಎಂ. ಬಿ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ ಹಾಗೂ ವಿವಿಯ ಅಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.