ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಬಸವನ ಬಾಗೇವಾತಿ ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾ. ಪಂ. ಯ ನಾನಾ ವಿಭಾಗಗಳ ಪರಿಶೀಲನೆ ನಡೆಸಿದ ಅವರು, ಕಚೇರಿಗೆ ನಾನಾ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಕಾರ್ಯಕ್ಕಾಗಿ ವಿಳಂಭ ಧೋರಣೆ ಅನುಸರಿಸದೇ ನಿಗದಿತ ಕಾಲಾವಧಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ನಂತರ ತಾಲೂಕು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಅವರು, ಆಸ್ಪತ್ರೆಯ ನಾನಾ ವಿಭಾಗಗಳಾದ ಪ್ರಯೋಗಾಲಯ, ರಕ್ತ ಶೇಖರಣೆ ಕೇಂದ್ರ, ಡಯಾಲಸಿಶ, ನೋಂದಣಿ ವಿಭಾಗ, ಆಪರೇಷನ್ ಕೊಠಡಿ, ಚಿಕ್ಕಮಕ್ಕಳ ಪ್ರಸೂತಿ ಕೇಂದ್ರ, ಹೀಗೆ ಆಸ್ಪತ್ರೆಯ ನಾನಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಆಸ್ಪತ್ರೆಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಕುರಿತು ಪಂಚಾಯಿತಿ ರಾಜ್ ಎಂಜಿನಿಯರ ವಿಭಾಗಕ್ಕೆ ಬೇಡಿಕೆ ಸಲ್ಲಿಸುವಂತೆ ತಾಲೂಕು ಅರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ನೋಂದಣಿಯಾದ ರೋಗಿಗಳ ಜೊತೆ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ದಾಖಲಾದ ರೋಗಿಗಳಿಂದ ಮತ್ತು ರೋಗಿಗಳ ಪಾಲಕರೊಡನೆ ಚರ್ಚೆ ನಡೆಸಿ ಮಾಹಿತಿಯನ್ನು ಪಡೆದುಕೊಂಡ ಅವರು, ಆರೋಗ್ಯ ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ. ಯುವರಾಜ ಹನಗಂಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್. ಎಸ್. ಒತಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.