ಭವಿಷ್ಯದಲ್ಲಿ ಕೃತಕ ಬುದ್ದಿಮತ್ತೆ ಸಂಶೋಧನೆಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ- ಡಾ. ವೈ. ಎಂ. ಜಯರಾಜ

ವಿಜಯಪುರ: ಭವಿಷ್ಯದಲ್ಲಿ ಕೃತಕ ಬುದ್ದಿಮತ್ತೆ ಸಂಶೋಧನೆ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಲಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ ಫಾರ್ಮಸಿ ಕಾಲೇಜಿನಲ್ಲಿ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮಷೀನ್ ಲರ್ನಿಂಗ್ (ML) ಆ್ಯನ್ ಅಪ್ಲಿಕೇಶನ್ ಪ್ರಾಸ್ಪೆಕ್ಟಿವ್ ಇನ್ ಹೆಲ್ತಕೇರ್ ಆ್ಯಂಡ್ ಎಜುಕೇಶನ್ ಸೆಕ್ಟರ್ಸ್ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ದಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲಿ ಅದರದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದು ಫಾರ್ಮಸಿ ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೇ, ಎಲ್ಲ ರೀತಿಯ ಸಂಶೋಧನೆಗಳಲ್ಲಿ ಮುಂಬರುವ ದಿನಗಳಲ್ಲಿ ಗಣನೀಯ ಪ್ರಭಾವ ಬೀರಲಿದೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ವೈ. ಎಂ. ಜಯರಾಜ ಮಾತನಾಡಿದರು

ಫಾರ್ಮಸಿ ವಿಭಾಗದ ಎನ್. ಬಿ. ಎ. ಅಧ್ಯಕ್ಷ ಡಾ. ಸಿ. ಕೆ. ಕೊಕಾಟೆ ಮಾತನಾಡಿ, ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಫಾರ್ಮಸಿಯ ಎಲ್ಲ ಸ್ಟಾರ್ಟ್ಅಪ್ ಗಳು ತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ಬಹುಉಪಯೋಗಿ ಆಗಲಿದೆ. ಎಲ್ಲರೂ ಈ ಕೃತಕ ಬುದ್ದಿಮತ್ತೆಯ ಅಧ್ಯಯನ ನಡೆಸಿ ಸಂಶೋಧನೆ ಮತ್ತೀತರ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಕೈಜೋಡಿಸಬೇಕು ಎಂದು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಇಂಥ ಕಾರ್ಯಾಗಾರಗಳಿಂದ ಔಷಧ ವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ತಜ್ಞರಿಗೆ ಹೆಚ್ಚಿನ ಜ್ಞಾನಾರ್ಜನೆ ಮಾಡಲು ಅನುಕೂಲವಾಗುತ್ತದೆ. ಸಂಶೋಧನೆಗಳು ನಿರಂತರವಾಗಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯನ್ನು ಬಳಸಿ ಮತ್ತಷ್ಚು ಸಾಧನೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ, ಉಪನ್ಯಾಸಕರಾದ ಡಾ. ಎಸ್. ಎಂ. ಬಿರಾದಾರ, ಡಾ. ಬಿ. ಎಸ್. ಹುಣಸಗಿ, ಡಾ. ಅನಿಲ ಕನ್ನೂರ, ಪುಣೆಯ ಡಾ. ಸಂತೋಷ ಭುಜಬಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌