ವಿಜಯಪುರ: ಜೆ. ಡಿ. ಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಜೆಡಿಎಸ್ ತೊರೆಯುವುದಿಲ್ಲ ಎಂದು ಜಾತ್ಯತೀತ ಜನತಾ ದಳದ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ ಹೇಳಿದ್ದಾರೆ.
ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಜೆಡಿಎಸ್ ಹಿರಿಯ ಮುಖಂಡರೂ ಆಗಿರುವ ಜಿ. ಟಿ. ದೇವೇಗೌಡ, ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿ ಜೆಡಿಎಸ್ ಮೈತ್ರಿಯ ಕಾರಣದಿಂದ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಸಿ. ಎಂ. ಇಬ್ರಾಹಿಂ ಪಕ್ಷ ಬಿಡಲಿದ್ದಾರೆ ಎಂಬುದು ಸರಿಯಲ್ಲ. ಸಿ. ಎಂ. ಇಬ್ರಾಹಿಂ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷವನನ್ನು ಬಿಡಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯನ್ನು ಸಿ. ಎಂ. ಇಬ್ರಾಹಿಂ ಅವರು ವಿರೋಧ ಮಾಡಿಲ್ಲ. ಜೆ. ಡಿ. ಕೋರ್ ಕಮಿಟಿ ಅಧ್ಯಕ್ಷ ಎಂದು ನನ್ನ ಹೆಸರನ್ನು ಅವರೇ ಘೋಷಣೆ ಮಾಡಿದ್ದಾರೆ. ಸದ್ಯ ನಮ್ಮ ಪಕ್ಷದಲ್ಲಿ ಮುಂದೆ ಯಾವ ರೀತಿ ಒಗ್ಗಟ್ಟಾಗಿ ಹೋಗಬೇಕು ಎಂಬ ಚರ್ಚೆ ನಡೆಯುತ್ತಿದೆ. ಅದನ್ನು ಬಿಟ್ಟು ಸಿ. ಎಂ. ಇಬ್ರಾಹಿಂ ಅವರ ಕುರಿತ ಚರ್ಚೆ ನಡೆದಿಲ್ಲ. ಅವರು ಜೆ. ಡಿ. ಎಸ್ ನಲ್ಲಿಯೇ ಇರಲಿದ್ದಾರೆ ಎಂದು ಜಿ. ಟಿ. ದೇವೇಗೌಡ ಹೇಳಿದರು.
ಸಿ. ಎಂ. ಇಬ್ರಾಹಿಂ ಅವರು ಬಿಜೆಪಿ ಮೈತ್ರಿಯ ಕುರಿತು ದೊಡ್ಡ ಗೌಡರ ಜೊತೆಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ಜೊತೆಗೆ ಎಷ್ಟು ಸೀಟ್ ಹಂಚಿಕೆಯಾಗಬೇಕು ಮತ್ತು ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕುರಿತು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಜೊತೆ ಹೋಗಲು ಯಾವುದೆ ವಿರೋಧವಿಲ್ಲ ಎಂಬುದಕ್ಕೆ ಇಬ್ರಾಹಿಂ ಸಹಮತ ವ್ಯಕ್ತಪಡೆಸಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಸರಕಾರ ಬದಲಾವಣೆ ಆಗುತ್ತದೆ ಎಂದು ಜೆ. ಡಿ. ಎಸ್ ನಾಯಕ ಹಾಗೂ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅದು ಹಗಲಕು ಕನಸು ಎಂದು ಟೀಕಿಸಿರುವುದಕ್ಕ ಶಾಸಕರೂ ಆಗಿರುವ ಜಿ. ಟಿ. ದೇವೆಗೌಡ ಕಿಡಿ ಕಾರಿದರು.
ನಾವು ಹಗಲು ಕನಸು ಕಾಣುತ್ತಿಲ್ಲ. ಕಾಂಗ್ರೆಸ್ಸಿನ ಮುಖಂಡರೇ ಆ ರೀತಿ ಹೇಳುತ್ತಿದ್ದಾರೆ. ಸಚಿವ ಕೆ. ಎನ್. ರಾಜಣ್ಣ ಏನು ಹೇಳಿದ್ದಾರೆ? ಲೋಕಸಭೆಯಲ್ಲಿ ಗೆಲ್ಲದೆ ಹೋದರೆ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ. ಇದನ್ನು ನಾವು ಹೇಳಿದ್ದಾ? ಎಂದು ಅವರು ಪ್ರಶ್ನೆ ಮಾಡಿದರು.
ಈಗಾಗಲೇ ಕಾಂಗ್ರೆಸ್ ಶಾಸಕರೆ ಬಾಯಿ ಬಡ್ಕೋತಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಕಂಪ್ಲಿ ಶಾಸಕ ಗಣೇಶ, ಗಂಗಾವತಿ ಶಾಸಕ ಬಸವರಾಜ ರಾಯರೆಡ್ಡಿ ಅಸಮಧಾನ ಹೊರ ಹಾಕಿದ್ದಾರೆ. ಇನ್ನು ರಾಜ್ಯದ ಜನ ಅದಕ್ಕಿಂತ ಜಾಸ್ತಿ ಬಾಯಿ ನಡೆಯುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಕಣ್ಣು ಇಲ್ಲ. ಕಿವಿಯೂ ಇಲ್ಲ ಎಂದು ಜಿ. ಟಿ. ದೇವೇಗೌಡ ವಾಗ್ದಾಳಿ ನಡೆಸಿದರು.