ವಿಜಯಪುರ: ಸರಕಾರದ ಮುಂದಾಲೋಚನೆ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಮಾಜಿ ಸಚಿವ ಎಸ್. ಎ. ರಾಮದಾಸ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಡ್ ಶೆಡ್ಡಿಂಗ್ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇಶದಲ್ಲಿ ಕರ್ನಾಟಕದಲ್ಲಿಯೇ ಅತಿಹೆಚ್ಚು ಕರೆಂಟ್ ಉತ್ಪಾದನೆ ಆಗುತ್ತಿತ್ತು ಎಂದು ಹೇಳಿದ ಅವರು, ಆದರೆ ಈ ಸರಕಾರ ಬಂದ ಮೇಲೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಇದು ದುರ್ದೈವದ ಸಂಗತಿ ಎಂದು ಕಿಡಿ ಕಾರಿದರು.
ರೈತರಿಗೆ ಬೇಕಾದ ಕರೆಂಟ್ ಪೂರೈಸಲು ಅಸಾಧ್ಯ ಎಂಬಂಥ ಪರಿಸ್ಥಿತಿ ಉಂಟಾಗಿದೆ. ಸೋಲಾರ ವಿದ್ಯುತ್ ಸೌಲಭ್ಯ ಹೊಂದಿದವನಿಗೆ ಕರೆಂಟ್ ಕೊಡಲ್ಲ ಎಂದು ಹೇಳುತ್ತಾರೆ. ಈಗಿನಿಂದಲೆ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ. ವಿತರಣೆ ಹಾಗೂ ಆರ್ಥಿಕ ಸಮಸ್ಯೆಯಿಂದ ಈ ದುಸ್ಥಿತಿ ಎದುರಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಸರಕಾರಕ್ಕೆ ಮುಂದಾಲೋಚನೆ ಇಲ್ಲ
ಈ ಸರಕಾರ ವಿದ್ಯುತ್ ಸಮಸ್ಯೆ ಕುರಿತು ಮೊದಲೆ ಪೂರ್ವ ತಯಾರಿ ನಡೆಸಬೇಕಿತ್ತು. ಈ ಬಾರಿ ವಾಡಿಕೆಯಂತೆ ಮಳೆ ಆಗಿಲ್ಲ. ಇದರಿಂದಾಗಿ ಜಲ ವಿದ್ಯುತ್ ಸಿಗಲ್ಲ ಎಂಬುದು ಗೊತ್ತಾಗುತ್ತದೆ. ಆದ ಉಷ್ಣವಿದ್ಯುತ್ ಉತ್ಪಾದನೆ ಯೋಚನೆ ಮಾಡಬೇಕಿತ್ತು. ಸರಕಾರ ಪ್ಲ್ಯಾ ನ್ ಮಾಡದಿದ್ದರೆ ಹೀಗೆ ವಿಫಲ ಆಗಬೇಕಾಗುತ್ತದೆ. ಇದರ ದುಷ್ಪರಿಣಾಮವನ್ನು ಜನಸಾಮಾನ್ಯ ಎದುರಿಸುವಂತಾಗಿದೆ. ಈ ನೋವು ನಮಗೂ ಇದೆ ಎಂದು ಎಸ್. ಎ. ರಾಮದಾಸ ಹೇಳಿದರು.
ಪ್ರಗತಿಪರರಿಂದ ಮಹಿಷಿ ದಸರಾ ಆಚರಣೆ ವಿಚಾರ
ಮೈಸೂರಿನಲ್ಲಿ ನಾನಾ ಪ್ರಗತಿಪರ ಸಂಘಟನೆಗಳಿಂದ ಮಹಿಷಿ ದಸರಾ ಆಚರಣೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ರಾಜನಾದವನ ಮನಸ್ಥಿತಿ ಹೇಗಿರುತ್ತೋ ಆ ರೀತಿ ರಾಜ್ಯದಲ್ಲಿ ಆಡಳಿತ ನಡೆಯುತ್ತಿರುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಇವರ ಸರಕಾರ ಬಂದ ತಕ್ಷಣ ಆ ತಾಯಿಯ ಸೇವೆ ಮಾಡುವ ವಿಚಾರದಲ್ಲಿಯೂ ಅನಾವಶ್ಯಕ ಗೊಂದಲ ಸೃಷ್ಠಿಯಾಗಿದೆ ಎಂದು ಅವರು ಹೇಳಿದರು.
ಮಹಿಷಿ ದಸರಾ ವಿಚಾರ ಹೊಸದೇನಲ್ಲ. ನಾನು ಮಂತ್ರಿಯಾಗಿದ್ದಾಗಲೂ ಈ ವಿಚಾರ ಇತ್ತು. ಅವರ ಮನಸ್ಸಿನಲ್ಲೇನೋ ಒಂದು ಭಾವನೆ ಇತ್ತು. ಅರ್ಧಗಂಟೆ ಅಲ್ಲಿ ಬಂದು ಅವರ ಮನಸ್ಸಿನಲ್ಲಿನ ಭಾವನೆಗಳನ್ನು ಹೇಳಿ ಹೋಗುತ್ತಿದ್ದರು. ಆದರೆ ಅದಕ್ಕೆ ಒಂದು ಬಣ್ಣ ಕೊಡುವ ವ್ಯವಸ್ಥೆ ಸರಿಯಲ್ಲ ಎಂದು ಅವರು ಹೇಳಿದರು.
ಕೆಲವರು, ನಾಲ್ಕಾರು ಜನ ಮಹಿಶಾಸುರನ ಜೊತೆಯಲ್ಲಿ ಬಂದು ನಿಂತು ಫೋಟೊ ತೆಗೆಸಿಕೊಂಡು ಹೋಗುವ ವ್ಯವಸ್ಥೆ ಇತ್ತು. ಅದಕ್ಕೆ ಇಂದು ವಿಶೇಷವಾದ ಬಣ್ಣವನ್ನು ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಎಸ್. ಎ. ರಾಮದಾಸ ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮುಂತಾದವರು ಉಪಸ್ಥಿತರಿದ್ದರು.