ವಿಜಯಪುರ: ನಗರದ ಹೊರವಲಯದ ಭೂತನಾಳ ತಾಂಡಾದಲ್ಲಿರುವ ಪುರಾತನ ಶ್ರೀ ದುರ್ಗಾದೇವಿ ದೇವಾಲಯದ ಸರ್ವತೋಮುಖ ಪ್ರಗತಿಗಾಗಿ ಸಂಸದ ರಮೇಶ ಜಿಗಜಿಣಗಿ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯಿಂದ ರೂ. 1 ಕೋ. ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಬಾಬು ಚವ್ಹಾಣ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಂಸದರು ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ರೂ. 1 ಕೋ. ವಿಶೇಷ ಅನುದಾನ ಮಂಜೂರು ಮಾಡಿಸಿದ್ದಾರೆ. ಸಂಸದರು ಅಭಿವೃದ್ಧಿ ಪರ ರಾಜಕಾರಣಿಯಾಗಿದ್ದು, ಆಧ್ಯಾತ್ಮಿಕತೆಗೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಲ್ಲದೇ, ಈಗ ಭೂತನಾಳ ತಾಂಡಾದ ಪುರಾತನ ದುರ್ಗಾದೇವಿ ದೇವಾಲಯಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ದೇವಾಲಯದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಭೂತನಾಳ ಗ್ರಾಮಸ್ಥರ ನಿಯೋಗ ಈ ಹಿಂದೆ ಸಂಸದ ರಮೇಶ ಜಿಗಜಿಣಗಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿತ್ತು, ಅಲ್ಲಿನ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಂಸದರು ಮೈಸೂರಿನಲ್ಲಿರುವ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ ರೂ. 1 ಕೋ. ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದು ಪ್ರತಿಯೊಬ್ಬರಲ್ಲೂ ಸಂತಸ ಮೂಡಿಸಿದೆ ಎಂದು ಬಾಬು ಚವ್ಹಾಣ ತಿಳಿಸಿದ್ದಾರೆ.