ವಿಜಯಪುರ: ನಾಡಹಬ್ಬದ ಅಂಗವಾಗಿ ನಗರದ ರಾಮ ಮಂದಿರ ರಸ್ತೆಯಲ್ಲಿರುವ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ಪ್ರತಿವರ್ಷ ನಾನಾ ಮಾದರಿಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆಯುತ್ತಿದ್ದು, ಈ ಬಾರಿಯೂ ವಿಶೇಷ ಮಾದರಿ ನಿರ್ಮಿಸಿದೆ.
44ನೇ ದಸರಾ ಹಬ್ಬದ ಆಚರಣೆ ಅಂಗವಾಗಿ ಈ ಬಾರಿ ಪುಣೆಯ ದೇಹುಗಾಂವ ಗಾಥಾ ಮಂದಿರ ನಿರ್ಮಿಸಲಾಗಿದೆ. ದಸರಾ ಅಂಗವಾಗಿ ಅ. 17 ರಂದು ಮಂಗಳವಾರ ರಾಮ ಮಂದಿರದಿಂದ ನಾಡದೇವಿಯ 101 ಕೆಜಿ ಬೆಳ್ಳಿಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿರುವ ಈ ಮೆರವಣಿಗೆಯಲ್ಲಿ ಮಹಾರಾಷ್ಟ್ರದ ವಿಶೇಷ ವಾದ್ಯ ತಂಡಗಳಾದ ಕರಾಡ ಶಿವರುದ್ರಾಕ್ಷ ಡೋಲ, ಸೋಲಾಪೂರ ಲೇಜಿಮ್, ಜಮಖಂಡಿ ಬ್ಯಾಂಡ್ ಕಂ.ಕರಡಿ ಮಜಲು, ಡೊಳ್ಳು ಕುಣಿತ, ಆನೆ, ಒಂಟಿ, ಕುದುರೆ, ಶಕ್ತಿ ಪ್ರದರ್ಶನ, ಸಿಡಿಮದ್ದು ಹಾರಿಸುವ ನಾನಾ ತಂಡಗಳು ಪಾಲ್ಗೋಂಡು ಮೆರವಣಿಗೆಗೆ ಮೆರಗು ನೀಡಲಿವೆ.
ಅಲ್ಲದೇ, ಅ. 21 ರಂದು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅ. 22 ರಂದು ಮಹಾ ಮೃತ್ಯಂಜಯ ಹೋಮ, ಹವನ ನಡೆಯಲಿವೆ. ಸಮಾರೋಪ ಸಮಾರಂಭ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂಡಳಿಯ ಮುಖಂಡ ಗುರು(ಗುರುಪಾದಯ್ಯ)ಗಚ್ಚಿನಮಠ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.