ವಿಜಯಪುರ: ಆದಿಲ್ ಷಾಹಿ ಕಾಲದಲ್ಲಿ ನಿರ್ಮಿಸಲಾಗಿರುವ ಮತ್ತು ಬೇಸಿಗೆ ಅರಮನೆ ಕೆರೆ ಎಂದೇ ಖ್ಯಾತವಾಗಿರುವ ಕುಮಟಗಿ ಕೆರೆ ಮತ್ತು ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕುಮಟಗಿ ಬೇಸಿಗೆ ಅರಮನೆ ಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅವರು ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸರಕಾರದ ಜಮೀನುಗಳನ್ನು ಗುರುತಿಸಿ ನಕ್ಷೆ ಸಿದ್ಧಪಡಿಸಿ ಸಲ್ಲಿಸಲು ಕಂದಾಯ ನಿರೀಕ್ಷಕರಿಗೆ ಮತ್ತು ಸ್ಮಾರಕ ಸುತ್ತಮುತ್ತಲಿನ ಕಸ-ಕಂಟಿಗಳನ್ನು ಸ್ವಚ್ಛಗೊಳಿಸುವ ಕ್ರಮಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ವಿಜಯಕುಮಾರ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಲಕುಮಾರ ಬಣಜಿಗೇರ ಉಪಸ್ಥಿತರಿದ್ದರು.