ಲಿಂಬೆಹಣ್ಣು, ಸಮುದ್ರದ ಮರಳಿನಿಂದ ತಯಾರಾಯ್ತು ನಾಡದೇವಿ- ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಗೆಲ್ಲಲಿ ಎಂದು ಶುಭ ಸಂದೇಶ- ಎಲ್ಲಿದೆ ಗೊತ್ತಾ?

ವಿಜಯಪುರ: ವಿಶ್ವಾದ್ಯಂತ ಈಗ ವಿಶ್ವಕಪ್ ಕ್ರಿಕೆಟ್ ಹವಾ ಜೋರಾಗಿದೆ.  ಭಾರತದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಈಗ ಕ್ರಿಕೆಟ್ ಕ್ರೇಜ್ ಹೆಚ್ಚಿಸಿದೆ.  ಈ ಮಧ್ಯೆ ನಾಡಹಬ್ಬ ದಸರಾ ಸಂಭ್ರಮವೂ ಜೋರಾಗಿದೆ. 

ಇದೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಸವ ನಾಡು ವಿಜಯಪುರದಲ್ಲಿ ಓಡಿಶ್ಯಾದ ಖ್ಯಾತ ಕಲಾವಿದ ಮತ್ತು ಸಮುದ್ರದ ಮರಳಿನಿಂದ ಕಲಾಕೃತಿ ರಚಿಸುವ ಸುದರ್ಶನ ಪಟ್ನಾಯಕ್ ನಿರ್ಮಿಸಿರುವ ಮಾದರಿಯೊಂದು ಗಮನ ಸೆಳೆಯುತ್ತಿದೆ.

ವಿಜಯಪುರ ನಗರದ ಶಹಾಪೇಟಿ ಗಲ್ಲಿಯ ಮುಖ್ಯ ರಸ್ತೆಯಲ್ಲಿ ಪ್ರತಿವರ್ಷ ನಾಡಹಬ್ಬ ದಸರಾ ಅಂಗವಾಗಿ ಪ್ರತಿಷ್ಠಾಪಿಸಲಾಗುವ ನಾಡದೇವಿ ಆಕರ್ಷಣೆಯ ಕೇಂದ್ರವಾಗುತ್ತಿದೆ.  ಇಲ್ಲಿನ ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ಪ್ರತಿ ವರ್ಷ ನಾನಾ ಮಾದರಿಗಳನ್ನು ನಿರ್ಮಿಸಿ ಜನರ ಭಕ್ತಿಗೆ ಪಾತ್ರವಾಗುತ್ತಿದೆ.  ಈ ಬಾರಿ ತಯಾರಿಸಲಾದ ದುರ್ಗಾದೇವಿಯ ಮಾದರಿ ಈಗ ಗಮನ ಸೆಳೆದಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮತ್ತು ಓಡಿಶ್ಯಾದ ಖ್ಯಾತ ಮರಳು ಚಿತ್ರಕಲಾಕಾರ ಸುದರ್ಶನ್ ಪಟ್ನಾಯಕ ಮತ್ತು ಅವರ ತಂಡದ ಕಲಾವಿದರು ನಿಂಬೆಹಣ್ಣು ಮತ್ತು ಸಮುದ್ರದ ಮರಳಿನಿಂದ ತಯಾರಿಸಿದ ಮಾದರಿ ಜನಮನ ಸೂರೆಗೊಂಡಿದೆ.  ದೇವಿ ಎಂದರೆ ಸಾಕು ಅಲ್ಲಿ ಲಿಂಬೆಹಣ್ಣಗಳು ಬೇಕೆ ಬೇಕು.  ಲಿಂಬೆಹಣ್ಣುಗಳಲ್ಲಿ ದೈವಿಶಕ್ತಿ ಇದೆ ಎಂದೇ ಬಹುತೇಕರು ನಂಬುತ್ತಾರೆ.  ಹೀಗಾಗಿ ಸುಮಾರು 5000 ಲಿಂಬೆಹಣ್ಣಿ ಬಳಸಿ ಮತ್ತು 115 ಟನ್ ಸಮುದ್ರದ ಮರಳಿನಿಂದ ದೇವಿಯ ಕಲಾ ಕೃತಿ ರೂಪಿಸಲಾಗಿದೆ.

ಇದು ದೇವಿಯ ಭಕ್ತರಿಗೆ ಪ್ರೀಯವಾಗಿದ್ದಾರೆ, ಈ ಬಾರಿ ದಸರಾ ಸಂದರ್ಭದಲ್ಲಿಯೇ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಕ್ರೇಜ್ ನ್ನು ಕೂಡ ಇಲ್ಲಿ ಹೆಚ್ಚುವಂತೆ ಕಲಾಕೃತಿ ರಚಿಸಲಾಗಿದೆ.  ಭಾರತ ಈ ಬಾರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ವಿಶ್ವವಿಜೇತ ತಂಡವಾಗಿ ಹೊರಹೊಮ್ಮಲಿ ಎಂದು ಪ್ರಾರ್ಥಿಸಿ ಕ್ರಿಕೆಟ್ ಅಭಿಮಾನಿಯೊಬ್ಬ ದೇವಿ ಮೊರೆ ಹೋಗಿರುವ ಕಲಾಕೃತಿಯೂ ಇಲ್ಲಿದೆ.  ಕ್ರಿಕೆಟ್ ಭಕ್ತನೋರ್ವ ಕಾಲು ಮಡಚಿ, ತಲೆ ಬಾಗಿಸಿ ಎರಡೂ ಕೈ ಮುಗಿದು ದೇವಿಯ ಆಶೀರ್ವಾದ ಕೇಳುತ್ತಿದ್ದಾನೆ.  ಪ್ಲೇಯಿಂಗ್ ಫಾರ್ ಬ್ಲೆಸ್ಸಿಂಗ್ಸ್ ಟೀಮ್ ಭಾರತ್ ಎಂದು ಭಾರತೀಯ ವ್ಯಕ್ತಿ ದೇವಿಗೆ ಮೊರೆ ಇಟ್ಟಿದ್ದಾನೆ.

ಈ ಬಾರಿ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಗೆಲ್ಲಲೇಬೇಕು.  ಇದಕ್ಕಾಗಿ ದುರ್ಗಾಮಾತೆಯ ಆಶೀರ್ವಾದವೂ ಬೇಕು.  ಕರುಣೆ ತೋರು ತಾಯಿ ಎಂದು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿರುವ ಭಾವನೆಗಳನ್ನು ಇಲ್ಲಿ ಮರಳು ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ ದೇವಿಯ ರೂಪಕ ನಿರ್ಮಿಸಿದ್ದಾರೆ.

ಕಳೆದ 30 ವರ್ಷಗಳಿಂದ ಇಲ್ಲಿನ ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ದಸರಾ ಅಂಗವಾಗಿ ನಾಡದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದು, ಪ್ರತಿ ವರ್ಷ ನಾನಾ ಮಾದರಿಯ ದೇವಸ್ಥಾನಗಳು ಸೇರಿದಂತೆ ದೇವಿಯ ಭಕ್ತರಿಗೆ ಮುದ ನೀಡುವ ಹಾಗೂ ಜನರಿಗೂ ಉತ್ತಮ ಸಂದೇಶ ಸಾರುವ, ದೇಶಭಕ್ತಿಯನ್ನು ಪುಟಿದೇಳಿಸುವ, ದೈವಭಕ್ತಿಗೆ ಪ್ರೋತ್ಸಾಹ ನೀಡುವ ಮಾದರಿಗಳನ್ನು ನಿರ್ಮಿಸುವ ಮೂಲಕ ಜನಾಕರ್ಷಣಣೆಯ ಮಾಡುತ್ತಿದ್ದಾರೆ.

ಇಲ್ಲಿ ನಾಡದೇವಿ ಉತ್ಸವ ಆಚರಣೆಗೆ ಸಮಿತಿಯ ಎಲ್ಲ ಸದಸ್ಯರು, ಶಹಾಪೇಟಿ ಓಣಿಯ ಪ್ತತಿಯೊಂದು ಮನೆಯ ಹಿರಿಯರು, ಮಾತೆಯರು, ಯುವಕರು ಹಾಗೂ ಈ ಪ್ರದೇಶ ಮಾರುಕಟ್ಟೆಯಲ್ಲಿ ಬರುವುದರಿಂದ ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರು ತನು ಮನ ಧನದಿಂದ ದೇಣಿಗೆ ನೀಡಿ ಸಹಕರಿಸುತ್ತಿರುವುದು ನಾಡಹಬ್ಬವನ್ನು ವಿಜೃಂಭಣೆಯಿಂದ ಅಚರಿಸಲು ಸಹಕಾರಿಯಾಗಿದೆ ಎನ್ನುತ್ತಾರೆ ಸಮಿತಿಯ ಸಂಚಾಲಕ ಮತ್ತು ನಗರಸಭೆ ಮಾಜಿ ಸದಸ್ಯ ರಾಜೇಶ ಮೋಹನ್ ದೇವಗಿರಿ.

ಶಹಾಪೇಟಿ ಪ್ರದೇಶದ ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ಪ್ರತಿವರ್ಷ ಒಂದಿಲ್ಲೋಂದು ವಿಶೇಷ ಮಾದರಿಗಳನ್ನು ತಯಾರಿಸುವ ಮೂಲಕ ದಸರಾ ಹಬ್ಬದ ಮೆರಗನ್ನು ಹೆಚ್ಚಿಸುತ್ತಿರುವುದು ಭಕ್ತರ ಪ್ರೀತಿಗೆ ಪಾತ್ರವಾಗಿದೆ.

Leave a Reply

ಹೊಸ ಪೋಸ್ಟ್‌