ವಿಜಯಪುರ: ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ನಡೆದ ಐಟಿ ಧಾಳಿಯಲ್ಲಿ ಸಿಕ್ಕ ಹಣ ಬಿಜೆಪಿಯವರು 40% ಕಮಿಷನ್ ಸಂಗ್ರಹದ ಹಣವಿರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಣ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಗೆ ಬಳಸಲು ಸಂಗ್ರಹಿಸಿ ಇಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಐಟಿ ದಾಳಿಯಲ್ಲಿ ಸಿಕ್ಕ ಹಣ ಗುತ್ತಿಗೆದಾರರಿಗೆ ಸೇರಿದೆ. ಗುತ್ತಿಗೆದಾರರು ಮತ್ತು ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸರಕಾರ ಬಂದ ಬಳಿಕ ನಾವು ಈವರೆಗೆ ಯಾವುದೇ ಟೆಂಡರ್ ಕರೆದಿಲ್ಲ. ಬಹುಶಃ ಇದು ನಳಿನಕುಮಾರ ಕಟೀಲ ಅವರ 40 ಪರ್ಸೆಂಟ್ ಕಮಿಷನ್ ನಡೆದಿತ್ತಲ್ಲ. ಅದು ಸ್ಟೋರ್ ಆಗಿತ್ತು. ಅದು ಈಗ ಸಿಕ್ಕಿರಬಹುದು ಎಂಬುದು ನನ್ನ ಅನಸಿಕೆ ಎಂದು ಅವರು ಹೇಳಿದರು.
ಐಟಿ ದಾಳಿಯಲ್ಲಿ ಸಿಕ್ಕ ಹಣದ ಕುರಿತು ತನಿಖೆಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅಗ್ರಹ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಐಟಿಯವರು ರೇಡ್ ಮಾಡಿದ್ದಾರೆ. ಅದೇ ರೀತಿ ಆ ಹಣದ ಕುರಿತು ಐಟಿ ಇಲಾಖೆಯವರೇ ತನಿಖೆ ಮಾಡುತ್ತಾರೆ. ನಮ್ಮ ಸರಕಾರ ಯಾವುದೇ ಟೆಂಡರ್ ಕರೆದಿಲ್ಲ. ಬಹುಶಃ ಹಿಂದಿನ ಬಿಜೆಪಿ ಸರಕಾರದ 40 ಪರ್ಸೆಂಟ್ ಕಮಿಷನ್ ಇದೆಯಲ್ಲ. ಅದು ಪಂಚ ರಾಜ್ಯಗಳ ಚುನಾವಣೆಗಾಗಿ ಹೊರಗೆ ಬರುತ್ತಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.
ರಾಜ್ಯ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ವಿಚಾರ
ಇದೇ ವೇಳೆ, ರಾಜ್ಯ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. 20 ಕ್ಕೂ ಹೆಚ್ಚು ಶಾಸಕರ ಜೊತೆಗೆ ಸಚಿವ ಸತೀಶ ಜಾರಕಿಹೋಳಿ ಮೀಟಿಂಗ್ ಮಾಡಲು ಮೈಸೂರಿಗೆ ತೆರಳುತ್ತಿರುವ ವಿಷಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಬಂಡಾಯವಲ್ಲ. ನಿನ್ನೆಯೇ ಸತೀಶ್ ಜಾರಕಿಹೋಳಿ ನಾವು ಕೂಡಿದ್ದೇವು. ಮೈಸೂರು ದಸರಾಗೆ ಹೋಗುತ್ತಿದ್ದೇವೆ ಎಂದು ನನ್ನನ್ನೂ ಕರೆದರು. ಸುನೀಲ ಹನುಮುಕ್ಕನವರ ಹಾಗೂ ಇತಿರರು ಬಂದಿದ್ದರು. ಎಲ್ಲರೂ ಸೇರಿ ಮೈಸೂರು ದಸರಾಗೆ ಹೋಗೋಣ ಎಂದು ಹೇಳಿದರು. ಮೈಸೂರು ದಸರಾಗೆ ಹೋದರೆ ಅದು ಬಂಡಾಯವೇ? ಎಂದು ಪ್ರಶ್ನೆ ಮಾಡಿದ ಅವರು, ಮೊನ್ನೆ ಸಬ್ ಕಮೀಟಿ ಮೀಟಿಂಗ್ ನಲ್ಲಿ ಸತೀಶ ಜಾರಕಿಹೊಳಿ ಮತ್ತು ನಾವು ಚರ್ಚೆ ಮಾಡಿದ್ದೇವೆ. ದಸರಾಗೆ ಹೋದರೆ ಅಸಮಾಧಾನವಾ? ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಇಲ್ಲ. ಬಿಜೆಪಿ ಮತ್ತು ಜನತಾ ದಳದಲ್ಲಿ ಫುಲ್ ಅಸಮಾಧಾನವಿದೆ. ಸತೀಶ ಜಾರಕಿಹೋಳಿ ನನ್ನ ಆತ್ಮೀಯ ಸ್ನೇಹಿತರು. ಮೊನ್ನೆಯೂ ಕೂಡಾ ದಸರಾಗೆ ಹೋಗುತ್ತೇನೆ ಬನ್ನಿ ಎಂದು ಹೇಳಿದ್ದರು. ನಾನು ವಿದೇಶಿ ಪ್ರವಾಸದಲ್ಲಿದ್ದೇ 10- 15 ದಿನ ಜಿಲ್ಲೆಯಲ್ಲಿ ಇರಲಿಲ್ಲ. ನಮ್ಮ ಜಿಲ್ಲೆಯಲ್ಲಿ ಬರದ ಕುರಿತು ಮೀಟಿಂಗ್ ಮಾಡಬೇಕಿದೆ. ನೀವು ಹೋಗಿ ಬನ್ನಿ. ನಮಗೆ ದಸರಾದಲ್ಲಿ ಭಾಗಿಯಾಗೋ ಭಾಗ್ಯ ಇಲ್ಲಾ ಎಂದು ತಿಳಿಸಿದ್ದೆ ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.