ರಾಜ್ಯ ಸರಕಾರದ ವಿರುದ್ಧ ಗುಮ್ಮಟ ನಗರಿಯಲ್ಲಿ ಬಿಜೆಪಿ ಪ್ರತಿಭಟನೆ

ವಿಜಯಪುರ: ಸರಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ವಿದ್ಯುತ್ ಕಡಿತ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನೆ ಜಾಥಾ ನಡೆಸಿದರು.

ನಗರದ ಡಾ. ಬಿ. ಆರ್. ಅಂಬೇಡ್ಕರ ವೃತ್ತದಿಂದ ಆರಂಭವಾದ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.  ಈ ಸಂದರ್ಭದಲ್ಲಿ ಯಾವ ಅಧಿಕಾರಿಗಳೂ ಸ್ಥಳದಲ್ಲಿ ಇರದ ಕಾರಣ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಕೆಲ ಹೊತ್ತು ಧರಣಿ ನಡೆಸಿ ಅಸಮಾಧಾನ ಹೊರ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಮನವಿ ಸ್ವೀಕರಿಸಲು ಓರ್ವ ಅಧಿಕಾರಿಯೂ ಇಲ್ಲ ಎಂದಾದರೆ ಹೇಗೆ? ಇದು ಯಾವ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಅಂಬಿಕಾಪತಿ ಅವರ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.  ಇದು ಕೇವಲ ಒಂದು ಉದಾಹರಣೆ ಅಷ್ಟೇ.  ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಗೆ ಕಾಂಗ್ರೆಸ್ ಸರಕಾರ ಕೋಟಿಗಟ್ಟಲೇ ಕಮೀಷನ್ ಪಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.  ವಿದ್ಯುತ್ ಕ್ಷಾಮ ಎದುರಾಗಿದ್ದು, ರೈತರ ಜಮೀನುಗಳಿಗೆ ವಿದ್ಯುತ್ ದೊರಕದೇ ತೊಂದರೆ ಎದುರಿಸುವಂತಾಗಿದೆ.  ಇನ್ನೊಂದೆಡೆ ದುಬಾರಿ ಕರೆಂಟ್ ಬಿಲ್ ಸಾರ್ವಜನಿಕರನ್ನು ಹೈರಾಣಗೊಳಿಸಿದೆ.  ರೈತರು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ.  ಬಡವರು, ಕೂಲಿ ಕಾರ್ಮಿಕರು ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.  ರಾಜ್ಯ ಸರಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು ಕೂಡಲೇ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ರಾಜಿನಾಮೆ ನೀಡಿ ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು

ಬಿಜೆಪಿ ನಗರ ಮಂಡಳ ಅಧ್ಯಕ್ಷ, ಪಾಲಿಕೆ ಸದಸ್ಯ ಮಳುಗೌಡ ಪಾಟೀಲ ಮಾತನಾಡಿ, ರಾಜ್ಯ ಸರಕಾರ ಜನತೆಯನ್ನು ಕಗ್ಗತ್ತಲಿನಲ್ಲಿ ಮುಳುಗಿಸಿದೆ.  ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ಅಲ್ಲ ಸುಳ್ಳುರಾಮಯ್ಯ ಅವರ ಸರಕಾರ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದೆ.  ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜು ಕುರಿಯವರ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಬಿಜೆಪಿ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೊಟ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಸಂಜಯ ಪಾಟೀಲ ಕನಮಡಿ, ಅಶೋಕ ಅಲ್ಲಾಪೂರ, ಬಾಬುರಾಜೇಂದ್ರ ನಾಯಕ, ಮಹೇಂದ್ರ ನಾಯಕ, ಗೋಪಾಲ ಘಟಕಾಂಬಳೆ, ರಾಜು ಮಗಿಮಠ, ಮಲ್ಲಮ್ಮ ಜೋಗೂರ, ಛಾಯಾ ಮಸಿಯವರ, ಲಕ್ಷ್ಮಿ ಕನ್ನೋಳ್ಳಿ, ಮಹಾನಗರಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾರ ಗೋಸಾವಿ, ವಿಠ್ಠಲ ಹೊಸಪೇಠ, ಬಸವರಾಜ ಬೈಚಬಾಳ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ಸಂದೀಪ ಪಾಟೀಲ, ರಾಜೇಶ ತವಸೆ, ವಿಕಾಶ ಪದಕಿ, ಕಾಂತು ಶಿಂಧೆ, ಶಂಕರ ಹೂಗಾರ, ಅಬ್ದುಲ ಸತ್ತಾರ, ವಿನಾಯಕ ದಹಿಂಡೆ, ಶರಣಬಸು ಕುಂಬಾರ, ಮಡಿವಾಳ ಯಾಳವಾರ, ಆನಂದ ಮುಚ್ಚಂಡಿ, ಸಂತೋಷ ನಿಂಬರಗಿ, ಸಂಪತ ಕೋಹಳ್ಳಿ, ರವಿ ಚವ್ಹಾಣ, ಸಚಿನ ಬೊಂಬಳೆ, ಸೋಮು ಮಠ, ವಿಜಯ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌