ವಿಜಯಪುರ: ಕಾಲುವೆಗಳು ರೈತರ ಆಸ್ತಿ. ನೀರಿಗಾಗಿ ಯಾರೂ ಅವುಗಳನ್ನು ಒಡೆದು ಹಾನಿ ಮಾಡಬಾರದು ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮದ ವತಿಯಿಂದ 2022-23ನೇ ವರ್ಷದ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ವೈಯಕ್ತಿಕ ಕೊಳವೆ ಭಾವಿ ಕೊರೆದು, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶ ಹೆಚ್ಚಾಗುತ್ತಿದ್ದು, ಹೊಸದಾಗಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲು ಸುಮಾರು 50 ಅರ್ಜಿಗಳು ಬಂದಿವೆ. ಇನ್ನು ಮುಂದೆ ಹೊಲಗಾಲುವೆಗಳ ನಿರ್ಮಾಣ ಕಾರ್ಯವೂ ಆರಂಭವಾಗಲಿದ್ದು, ನೀರಾವರಿ ಪ್ರದೇಶ ವಿಸ್ತರಣೆಯಾಗಲಿದೆ. ಆದ್ದರಿಂದ ಯಾರೂ ಕಾಲುವೆಗಳನ್ನು ಒಡೆದು ನೀರು ಪಡೆಯಬಾರದು. ಕಾಲುವೆಗಳು ರೈತರ ಆಸ್ತಿಯಾಗಿದ್ದು, ಅವುಗಳ ರಕ್ಷಣೆಯೂ ರೈತರಿಗೆ ಸೇರಿದೆ. ರೈತರ ಭೂಮಿಯಲ್ಲಿ ಬಂಗಾರಂಥ ಬೆಳೆ ಬೆಳೆಯಲು ನೀರು ಅಗತ್ಯವಾಗಿದೆ. ಕಾಲುವೆಗಳನ್ನು ಹಾಳು ಮಾಡಿದರೆ, ರೈತರಿಗೆ ನಷ್ಟವಾಗಲಿದೆ. ನೀರು ಸಿಗದೆ ರೈತರ ಸಂಕಷ್ಟ ಹೆಚ್ಚಾಗಲಿದೆ. ಕೋಳಿಯೊಂದು ಚಿನ್ನದ ಮೊಟ್ಟೆ ನೀಡುತ್ತಿತ್ತು. ಆಗ ವ್ಯಕ್ತಿಯೊಬ್ಬ ಹೆಚ್ಚಿನ ಮೊಟ್ಟೆಗಳ ಆಸೆಗಾಗಿ ಚಿನ್ನದ ಕೋಳಿಯನ್ನೇ ಕೊಂದ ಕಥೆಯಂತೆ ಪರಿಸ್ಥಿತಿ ಎದುರಾಗಬಾರದು ಎಂದು ಅವರು ಕಿವಿಮಾತು ಹೇಳಿದರು.
ನೀರು ಬಳಕೆದಾರರ ಸಂಘ ಅಥವಾ ಸಲಹಾ ಸಮಿತಿ ರಚಿಸಲು ಕರೆ
ಎಲ್ಲ ಕಡೆ ನೀರು ಸಮರ್ಪಕವಾಗಿ ಸಿಗುವಂತಾಗಲು ರೈತರೆಲ್ಲರೂ ಸೇರಿಕೊಂಡು ನೀರು ಬಳಕೆದಾರರ ಸಂಘ ಅಥವಾ ಸಲಹಾ ಸಮಿತಿ ರಚಿಸಿಕೊಳ್ಳಿ. ಪಾಳಿಯಂತೆ ಎಲ್ಲರೂ ಸಮಾನವಾಗಿ ನೀರು ಪಡೆಯಿರಿ. ಕಾಲುವೆಗಳನ್ನು ಒಡೆಯುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ವಿಜಯಪುರ ಜಿಲ್ಲೆಗೆ ನೀರಾವರಿ ಆಗಿರಲಿಲ್ಲ. ಆಲಮಟ್ಟಿ ನಮ್ಮ ಜಿಲ್ಲೆಯಲ್ಲಿಯೇ ಇದ್ದರೂ ನಮಗೆ ನೀರು ಸಿಗುತ್ತಿರಲಿಲ್ಲ. ತಮ್ಮೆಲ್ಲರ ಆಶೀರ್ವಾದದಿಂದ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ಅಸಾಧ್ಯವಾಗಿದ್ದ ನೀರಾವರಿ ಕೆಲಸವನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಕೇವಲ ಮೂರು ವರ್ಷಗಳಲ್ಲಿ ತುಬಚಿ- ಬಬಲೇಶ್ವರ, ಮುಳವಾಡ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಏಷಿಯಾದಲ್ಲಿಯೇ ಅತೀ ಉದ್ದವಾದ ತಿಡಗುಂದಿ ಅಕ್ವಾಡಕ್ಟ್ ಮಾಡಿ ನೀರು ಹರಿಸಿದ್ದಾರೆ. ಈ ಮೂಲಕ ರೈತರ ಮುಂದಿನ ಪೀಳಿಗೆಗಳಿಗೂ ನೀರು ಸಿಗುವಂತೆ ನೀರಾವರಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಈ ಮುಂಚೆ ಮಳೆಯಾಗದಿದ್ದರೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಪ್ರತಿನಿತ್ಯ ನೂರಾರು ರೈತರು ನಮ್ಮ ಕಚೇರಿಗೆ ಬರುತ್ತಿದ್ದರು. ಎಂ. ಬಿ. ಪಾಟೀಲರ ನೀರಾವರಿ ಯೋಜನೆಗಳಿಂದಾಗಿ ಕಳೆದ ಆರೇಳು ವರ್ಷಗಳಿಂದ ಟ್ಟಾಂಕರ್ ಮೂಲಕ ನೀರು ಪೂರೈಸುವ ಸಮಸ್ಯೆ ಇಲ್ಲ. ಅಷ್ಟೇ ಅಲ್ಲ, ಸ್ವಂತ ಜಮೀನಿದ್ದರೂ ಉದ್ಯೋಗ ಅರಸಿ ನೆರೆಯ ಮಹಾರಾಷ್ಟ್ರ ಮತ್ತೀತರ ಕಡೆ ಗುಳೆ ಹೋಗುತ್ತಿದ್ದ ರೈತರು ಈಗ ನೀರಾವರಿ ಆಗಿರುವುದರಿಂದ ಊರಿಗೆ ಮರಳಿ ಇಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಮುಂಚೆ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತ ಕೇವಲ ಹೊಟ್ಟೆ ತುಂಬಿದರೆ ಸಾಕು ಎಂಬ ಪರಿಸ್ಥಿತಿ ಎದುರಿಸುತ್ತಿದ್ದ ರೈತರು ಈಗ ಪ್ರತಿ ವರ್ಷ ಕೆಲವು ರೈತರು ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಬಬಲೇಶ್ವರ ಮಾದರಿ ಮತಕ್ಷೇತ್ರವಾಗಿದೆ
ನೀರಾವರಿ, ರಸ್ತೆ, ಸಮುದಾಯ ಭವನ, ಶಾಲೆಗಳು, ಕೊಳವೆ ಭಾವಿಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಬಬಲೇಶ್ವರ ಮತಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ನಾವು ಇರದಿದ್ದರೂ ನೀರಾವರಿ ಯೋಜನೆಗಳು ಶಾಶ್ವತವಾಗಿ ಇರಲಿವೆ. ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ. ಇದಕ್ಕೆ ರೈತರ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.
ಈ ವೇಳೆ ರೈತರಾದ ಟಕ್ಕಳಕಿ ತಾಂಡಾದ ಸೇವು ಲಮಾಣಿ ಮತ್ತು ಜಾಲಗೇರಿ ತಾಂಡಾದ ರಾಹುಲ ಚವ್ಹಾಣ ಮಾತನಾಡಿ ತಮ್ಮ ಭಾಗದಲ್ಲಿ ನೀರಾವರಿಯಿಂದ ಆಗಿರುವ ಅಭಿವೃದ್ಧಿ ಕ್ರಾಂತಿಯ ಕುರಿತು ಸಂತಸ ವ್ಯಕ್ತಪಡಿಸಿದರು.
ಈ ಸಮಾವೇಶದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ 80 ಮತ್ತು ಕರ್ನಾಟಕ ನೀರಾವರಿ ನಿಗಮದ 160 ಸೇರಿದಂತೆ ಒಟ್ಟು 240 ಫಲಾನುಭವಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಧುಕರ ಜಾಧವ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಎಂ. ಎನ್. ಚೋರಗಸ್ತಿ ಉಪಸ್ಥಿತರಿದ್ದರು. ಸಚಿವರ ಆಪ್ತ ಸಹಾಯಕರು ದಶರಥ ಭೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ರೈತ ಮುಖಂಡ ಪ್ರಶಾಂತ ಝಂಡೆ ನಿರೂಪಿಸಿ ವಂದಿಸಿದರು.