ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ- ಡಾ. ಆರ್. ಎಸ್. ಮುಧೋಳ

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.

ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳು ಮತ್ತು ಜನಪರ ಆರೋಗ್ಯ ಸೇವೆಗಳ ಮೂಲಕ ಜನರನ್ನು ತಲುಪುತ್ತಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಸಚಿವರಾದ ಶ್ರೀ ಎಂ. ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆಯ ಜನ ಚಿಕಿತ್ಸೆಗಳಿಗಾಗಿ ಬೇರೆ ಊರಿಗೆ ತೆರಳುವುದು ತಪ್ಪಬೇಕು. ಮಹಾನಗರಗಳಲ್ಲಿ ದೊರೆಯುವ ಆರೋಗ್ಯ ಸೇವೆಯನ್ನು ಜಿಲ್ಲೆಯ ಜನ ನಮ್ಮ ಆಸ್ಪತ್ರೆಯಲ್ಲಿಯೇ ಪಡೆಯುವಂತಾಗಲು ಎಲ್ಲ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸಿದ್ದಾರೆ. ಇದು ರೋಗಿಗಳ ಪಾಲಿಗೆ ವರದಾನವಾಗಿದೆ ಎಂದು ಅವರು ಹೇಳಿದರು.

ವಿಜಯಪುರದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಆರ್. ಎಸ್. ಮುಧೋಳ ಮಾತನಾಡಿದರು

ಇದರಿಂದಾಗಿ ಈ ಭಾಗದ ಹೃದ್ರೋಗಿಗಳು ದೂರದ ಬೆಂಗಳೂರು, ಮುಂಬೈ ಸೇರಿದಂತೆ ಬೇರೆ ಊರುಗಳಿಗೆ ಚಿಕಿತ್ಸೆಗಾಗಿ ಪರದಾಡುವುದು ತಪ್ಪಲಿದೆ. ಕಡಿಮೆ ವೆಚ್ಚದಲ್ಲಿ ಇಲ್ಲಿಯೇ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಈಗಾಗಲೇ ಆಸ್ಪತ್ರೆಗೆ ಎನ್.ಎ.ಬಿ.ಎಚ್. ಮಾನ್ಯತೆ ಸಿಕ್ಕಿದ್ದು, ಕಿಡ್ನಿ ಕಸಿ ಅನುಮತಿಯೂ ಸಿಕ್ಕಿದೆ. ಅಲ್ಲದೇ, ಈಗಾಗಲೇ ಕಾರ್ನಿಯಾ ಸರ್ಜರಿ ಕೂಡ ನಡೆಯುತ್ತಿದೆ. ಅತೀ ಶೀಘ್ರದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಶಂಕುಸ್ಛಾಪನೆ ನೆರವೇರಲಿದೆ. ಟ್ರಾಮಾ ಸೆಂಟರ್ ಕೂಡ ಸಿದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ವಿವಿಯ ಕುಲಾಧಿಪತಿ ಎಂ. ಬಿ. ಪಾಟೀಲ ಅವರ ಆಶಯದಂತೆ ಆಸ್ಪತ್ರೆಯಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದೂ ಕೂಡ ಈ ಭಾಗದ ರೋಗಿಗಳ ಪಾಲಿಕೆ ವರದಾನವಾಗಲಿದೆ. ಅಲ್ಲದೇ, ಈ ಆಸ್ಪತ್ರೆಯಲ್ಲಿ ಕ್ಯಾಟರ್ಯಾಕ್ಟ್ ಮತ್ತು ಕಿಡ್ನಿ ಕಸಿ ಕೂಡ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸರಕಾರಿ ಮತ್ತು ಖಾಸಗಿ ಆರೋಗ್ಯ ವಿಮೆಗಳ ಅಡಿಯೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ಶ್ರೀ ಎಂ. ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾಲಕಾಲಕ್ಕೆ ಅಗತ್ಯವಾಗಿರುವ ಮತ್ತು ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಹೃದಯ ಶಸ್ತ್ರಚಿಕಿತ್ಸಕ ಮತ್ತು ಹೃದಯ ಶಸ್ತ್ರ ಚಿಕಿತ್ಸಕ ಡಾ. ರವಿ ಘಟ್ನಟ್ಟಿ ಮಾತನಾಡಿ, ತಾವು ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಆಸ್ಪತ್ರೆಗೆ ವಿಜಯಪುರ ಜಿಲ್ಲೆಯಿಂದ ಸಾಕಷ್ಟು ಜನ ಶಸ್ತ್ರಚಿಕಿತ್ಸೆಗಾಗಿ ಬರುತ್ತಿದ್ದರು. ಇದೇ ಭಾಗದವನಾಗಿರುವ ನನಗೆ ಅಖಂಡ ವಿಜಯಪುರ ಜಿಲ್ಲೆಯಲ್ಲಿಯೂ ಆಸ್ಪತ್ರೆಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆ ಸೌಲಭ್ಯ ಸಿಗುವಂತಾಗಬೇಕು ಎಂದು ಬಹಳಷ್ಟು ಸಲ ಯೋಚಿಸಿದ್ದೆ. ಈಗ ಶ್ರೀ ಎಂ. ಬಿ. ಪಾಟೀಲ ಅವರ ಮುತುವರ್ಜಿಯಿಂದಾಗಿ ಈ ಆಸ್ಪತ್ರೆಯಲ್ಲಿಯೇ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಈ ಭಾಗದ ಜನರ ಸೌಭಾಗ್ಯ ಎಂದು ಹೇಳಿದರು.

ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಇಂಡಿ ತಾಲೂಕಿನ 17 ವರ್ಷದ ಬಾಲಕನಿಗೆ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಊಟ ಮಾಡುವಾಗಲೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ಮಹಾ ಅಪಧಮನಿಯ ಕಿರಿದಾಗುವಿಕೆ (ಸ್ಟೆನೋಸಿಸ್ನೊಂದಿಗೆ) ಬೈಕಸ್ಪಿಡ್ ಮಹಾ ಅಪಧಮನಿಯ ಕವಾಟವನ್ನು ಹೊಂದಿದ್ದರು. ಇದು ಹೃದಯದ ಎಡಭಾಗದಲ್ಲಿರುವ ಮಹಾ ಅಪಧಮನಿಯ ಕವಾಟದ ಮೇಲೆ ಪರಿಣಾಮ ಬೀರುವ ಜನ್ಮಜಾತ ಹೃದಯ ಸಂಬಂಧಿ ಕಾಯಿಲೆಯಾಗಿದೆ. ಈ ಕಾಯಿಲೆ ಪ್ರಪಂಚದಾದ್ಯಂತ ಜನಿಸಿದ ಸುಮಾರು ಶೇ. 0.6 ನವಜಾತ ಶಿಶುಗಳಲ್ಲಿ ಕಂಡು ಬರುತ್ತದೆ. ಈ ಯುವಕ ನಮ್ಮ ಬಳಿಗೆ ಬಂದಾಗ, ಆರಂಭಿಕ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಮಹಾ ಅಪಧಮನಿಯ ಕವಾಟದ ಕಿರಿದಾಗುವಿಕೆಯಿಂದಾಗಿ ಅವರು ಬಹಳಷ್ಟು ತೊಂದರೆಗೀಡಾಗಿದ್ದರು. ಚಿಕಿತ್ಸೆ ನೀಡದಿದ್ದರೆ, ಮುಂದಿನ ಒಂದೆರಡು ವರ್ಷಗಳಲ್ಲಿ ಹಠಾತ್ ಹೃದಯ ಸಂಬಂಧಿ ಸಮಸ್ಯೆ ಎದುರಾಗುವ ಅಪಾಯವಿತ್ತು. ಈ ಹಿನ್ನೆಲೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಆತನ ಪೋಷಕರ ಒಪ್ಪಿಗೆ ಪಡೆಯಲಾಯಿತು. ನಂತರ ರೋಗಿಗೆ ನೆರವಾಗಲು ಆಯುಷ್ಮಾನ್ ಭಾರತ್ ಮತ್ತು ಆರೋಗ್ಶ ಕರ್ನಾಟಕ ಯೋಜನೆ(ABARK) ಅಡಿಯಲ್ಲಿ ಹೆಸರು ನೋಂದಾಯಿಸಿ 08.10.2023 ರಂದು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದ ಯುವಕನ ಬೇಗ ಗುಣಮುಖನಾಗಿದ್ದಾರೆ ಎಂದು ತಿಳಿಸಿದರು.

ಈಗ ಅವರು ಎಂದಿನಂತೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಅವರಿಗೆ ಉಸಿರಾಟದ ಸಮಸ್ಯೆ ದೂರವಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಇವರು ಜೀವಿತಾವಧಿವರೆಗೆ ರಕ್ತ ತಿಳಿಗೊಳಿಸುವ ಕೆಲವು ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಮಗ ಚೇತರಿಸಿಕೊಂಡಿರುವುದುಕ್ಕೆ ಯುವಕನ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇನ್ನು ಮುಂದೆಯೂ ಆಗಾಗ ಅಗತ್ಯವಾಗಿರುವ ಚಿಕಿತ್ಸೆಯನ್ನು ಶ್ರೀ ಬಿ. ಎಂ. ಪಾಟೀಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಯೇ ಪಡೆಯಲಿದ್ದಾರೆ. ಈ ಯುವಕ ಅತೀ ಶೀಘ್ರದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದಾಗಿದೆ. ಅಲ್ಲದೇ, ಮರಳಿ ಶಾಲೆಗೂ ಹೋಗಬಹುದಾಗಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌