ವಿಜಯಪುರ: ಬರದ ನಾಡಿನಲ್ಲಿ ಅರಣ್ಯ ಕ್ರಾಂತಿ ಮಾಡುವ ಉದ್ದೇಶದಿಂದ ಮತ್ತು ಬಸವ ನಾಡಿನ ಪಾರಂಪರಿಕ ತಾಣಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶ ಹೊಂದಿರುವ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023ರ ಲಾಂಛನ ಬಿಡುಗಡೆ ಸಮಾರಂಭ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಗೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.
ಬಳಿಕ ಮಾತನಾಡಿದ ಅವರು, ಡಿಸೆಂಬರ್ 24 ರಂದು ಐತಿಹಾಸಿಕ ವಿಜಯಪುರದಲ್ಲಿ ಅರಣ್ಯೀಕರಣ ಅಭಿವೃದ್ಧಿ ಪಡಿಸುವುದರ ಜೊತೆಗೆ ಸ್ಮಾರಕಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವೃಕ್ಷೋಥಾನ್ ಹೆರಿಟೇಜ್ ರನ್-2023ಅನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಪರಿಸರ ರಕ್ಷಣೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ಪರಿಣಾಮಕಾರಿಯಾಗಿ ಪ್ರಚಾರ ಮಾಡಲಾಗುವುದು. ಐತಿಹಾಸಿಕ ಸ್ಮಾರಕಗಳ ಮಹತ್ವದ ಕುರಿತು ಜನರಲ್ಲಿ ಆಸಕ್ತಿ ಮೂಡಿಸಿ, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜನರಲ್ಲಿ ಮರ ಬೆಳೆಸುವ ಪರಿಸರ ಉಳಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಮಾರಕಗಳ ಸಂರಕ್ಷಣೆ ಮಹತ್ವ ಈ ಮೂಲಕ ಸಾರಲಾಗುತ್ತಿದೆ ಎಂದು ಅವರು ಹೇಳಿದರು.
ಈ ಹಿಂದೆ ಕೋಟಿವೃಕ್ಷ ಅಬಿಯಾನ ಆರಂಭಿಸಿ ಪ್ರತಿ ವರ್ಷ 25 ಲಕ್ಷ ಸಸಿಳನ್ನು ನೆಟ್ಟು 5 ವರ್ಷಗಳಲ್ಲಿ ಒಂದು ಕೋಟಿ ಗಿಡಗಳನ್ನು ವಿಜಯಪುರದಲ್ಲಿ ಮರಗಳನ್ನಾಗಿ ಬೆಳೆಸಬೇಕೆಂಬ ಉದಾತ್ತ ಮನೋಭಾವದಿಂದ ಕೋಟಿ ವೃಕ್ಷ ಆರಂಭಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕೋಟಿ ವೃಕ್ಷ ಅಭಿಯಾನದಡಿ ಸಸಿಗಳ ಬೆಳೆಸುವಿಕೆ ಪ್ರಮಾಣ ಕುಂಠಿತಗೊಂಡು, 2017ರ ಮುಂಚೆ ಇದ್ದ ಸ್ಥಿತಿಯೇ ಮರುಕಳಿಸಿದೆ. ಅರಣ್ಯ ಬಲಪಡಿಸುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನಕ್ಕೆ ಪುನಶ್ಚೇತನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ಬರಗಾಲ ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಕೋಟಿ ವೃಕ್ಷ ಅಭಿಯಾನವನ್ನು ಹೆಚ್ಚು ಬಲಗೊಳಿಸುವ ಅವಶ್ಯಕತೆ ಇದೆ. ಪರಿಸರ ರಕ್ಷಣೆ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೋಟಿ ವೃಕ್ಷ ಅಭಿಯಾನದ ಜೊತೆಗೆ ಸಿಆರ್ ಡಿಎಸ್ ಫೌಂಡೇಶನ್ ಕೈ ಜೋಡಿಸಿದೆ. ಕೋಟಿ ವೃಕ್ಷ ಅಭಿಯಾನದಿಂದ ಸರ್ಕಾರಿ ಜಮೀನಿನ ಅತಿಕ್ರಮಣ ತಡೆಯಲು ಸಹ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ದೇಶದಲ್ಲಿಯೇ ಅತಿ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ಎರಡನೇ ನಗರ ವಿಜಯಪುರದ ಐತಿಹಾಸಿಕ ಸ್ಮಾರಕಗಳ ಕುರಿತು ವ್ಯಾಪಕ ಪ್ರಚಾರ ಹಾಗೂ ಜಾಗೃತಿ ಮೂಡಿಸಿ, ಹೆಚ್ಚೆಚ್ಚೆ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ವಿಜಯಪುರ ಪ್ರವಾಸೋದ್ಯಮ ಅಭಿವೃದ್ದಿ ಜೊತೆಗೆ ಜಿಲ್ಲೆಯ ಉದ್ದಿಮೆಗಳಿಗೆ, ವ್ಯಾಪಾರಕ್ಕೆ ಉತ್ತೇಜನ ದೊರೆಯಲಿರುವುದರಿಂದ ಈ ಬಾರಿ ಸ್ಮಾರಕಗಳ ರಕ್ಷಣೆ ಜೊತೆಗೆ ಪರಿಸರ ಜಾಗೃತಿ ಮೂಡಿಸಲು ಅಕ್ಟೋಬರ್ 24 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವೃಕ್ಷೋತ್ಥಾನ ಹೆರಿಟೇಜ್ ರನ್-2023 ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಡಿ. 24 ರಂದು ನಡೆಯುವ ಓಟದಲ್ಲಿ 3 ಕಿ. ಮೀ, 5 ಕಿ. ಮೀ, 10 ಕಿ. ಮೀ ಹಾಗೂ 21 ಕಿ. ಮೀ. ಗಳ ಓಟ ನಡೆಯಲಿದೆ. ನಗರದ ಡಾ. ಬಿ. ಆರ್. ಅಂಬೇಡ್ಕರ ಕ್ರೀಡಾಂಗಣದಿಂದ ಈ ಓಟಗಳು ಪ್ರಾರಂಭವಾಗಲಿವೆ. ನಂತರ ಐತಿಹಾಸಿಕ ಸ್ಮಾರಕಗಳಾದ ಗೋಲಗುಂಬಜ್, ಗಗನಮಹಲ್, ನರಸಿಂಹ ದೇವಸ್ಥಾನ, ಬಾರಾಕಮಾನ, ನಗರದ ಮುಖ್ಯ ವೃತ್ತಗಳು, ಸೈನಿಕ ಶಾಲೆ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಆವರಣ, ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆ, ಶತಮಾನಗಳ ಇತಿಹಾಸವಿರುವ ಶ್ರೀ ಸಿದ್ದೇಶ್ವರ ದೇವಾಲಯದ ಮುಂದೆ ಓಟಗಳು ನಡೆಯಲಿವೆ ಎಂದು ಸಚಿವರು ಹೇಳಿದರು.
ಶತಮಾನದ ಸಂತ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಮರ್ಪಿತವಾದ ಈ ಓಟದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೊರ ಜಿಲ್ಲೆ, ರಾಜ್ಯಗಳಿಂದ ಅಂದಾಜು 2 ರಿಂದ 3 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆ ಇದ್ದು, ಒಟ್ಟು 10 ಸಾವಿರ ಜನರು ಈ ಓಟದಲ್ಲಿ ಪಾಲ್ಗೋಳ್ಳಲಿದ್ದಾರೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಓಟವನ್ನು ನಿರಂತರವಾಗಿ ಆಯೋಜಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಸಚಿವರು ಸ್ವತಃ ವೃಕ್ಷೋತ್ಥಾನ್ ಹೆರಿಟೇಜ್ ರನ್-2023ರ ಆನಲೈನ್ ನೋಂದಣಿ ಮಾಡಿಕೊಳ್ಳುವ ಮೂಲಕ ಆನ್ ಲೈನ್ ನೋಂದಣಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವನೆ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ಪ್ರಾದೇಶಿಕ ವಲಯದ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆಬಿ ಜೆ ಎನ್‌ಎಲ್ ಅರಣ್ಯ ವಿಭಾಗದ ನಾಗಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ ಸೌದಾಗರ, ಮುರುಗೇಶ ಪಟ್ಟಣಶೆಟ್ಟಿ ಸಂಕೇತ ಬಗಲಿ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.