ವಿಜಯಪುರ: ಡಿಜಿಟಲ್ ತಂತ್ತಜ್ಞಾನದಿAದ ಈಗ ಆರೋಗ್ಯ ಸೇವೆಯ ಕ್ಷೇತ್ರ ವಿಸ್ತರಣೆಯಾಗುತ್ತಿದೆ. ವೈದ್ಯರು ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಗೆ ಒತ್ತು ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ನೀಡಿದ್ದಾರೆ.
ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ವೈದ್ಯರು ಜನರ ಪಾಲಿಗೆ ಜೀವ ರಕ್ಷಿಸುವ ದೇವರಿದ್ದಂತೆ. ಆದ್ದರಿಂದ ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯಿಂದ ಗ್ರಾಮೀಣ ಜನರ ಸೇವೆ ಮಾಡಬೇಕು. ಅವರಲ್ಲಿರುವ ನಂಬಿಕೆಯನ್ನು ಉಳಿಸಿ ಬೆಳೆಸಿಕೊಂಡು ಸೇವಾನಿಷ್ಠೆಯಿಂದ ಕೆಲಸ ಮಾಡಿದರೆ ಗುರಿ ತಲುಪಬಹುದು. ಇದು ನೀವು ಸಮಾಜದಿಂದ ಪಡೆದಿರುವುದುದನ್ನು ಹಿಂದಿರುಗಿಸುವ ಸೇವೆಯೂ ಆಗಿದೆ. ಈವರೆಗೆ ತಾವೆಲ್ಲರು ತಮ್ಮ ತಂದೆ- ತಾಯಿ ಮತ್ತು ಶಿಕ್ಷಕರ ಆಶ್ರಯದಲ್ಲಿದ್ದ ತಾವೆಲ್ಲರೂ ಈಗ ಸ್ವತಂತ್ರರಾಗಿದ್ದೀರಿ. ಹೆತ್ತ ಪೋಷಕರು, ಕಲಿಸಿದ ಗುರುಗಳು, ಸಮಾಜ ಮತ್ತು ದೇಶ ಹೆಮ್ಮೆಯಿಂದ ನೋಡುವಂತೆ ರೋಗಿಗಳ ಸೇವೆ ಮಾಡಿ ಎಂದು ಪದವಿ ಪಡೆದ ವೈದ್ಯರಿಗೆ ಕರೆ ಅವರು ನೀಡಿದರು.
ನಿಸ್ವಾರ್ಥ ಸೇವೆಯೇ ದೇವರ ಸೇವೆ. ಕಾಯಕವೇ ಕೈಲಾಸ ನಿಮ್ಮ ಜೀವನ ಮತ್ತು ವೃತ್ತಿ ಜೀವನದ ಮೂಲ ತತ್ವಗಳಾಗಿರಬೇಕು. ಮಾನವೀಯತೆ ಆಧಾರಿತ ಸೇವೆ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಪಡೆಯುವುದು ಮತ್ತು ಘಟಿಕೋತ್ಸವ ವಿಸ್ಮರಣೀಯವಾಗಿ ಘಟ್ಟಗಳು. ಇವು ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡುತ್ತವೆ. ಇದು ನಿಮ್ಮ ಜೀವನದ ಮುಂದಿನ ಹಂತದ ಆರಂಭ. ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸುವುದರ ಜೊತೆಗೆ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಲು ಶಕ್ತಿಯನ್ನೂ ನೀಡುತ್ತದೆ. ಈ ಸಂದರ್ಭದಲ್ಲಿ ನಿಮ್ಮ ದೂರದೃಷ್ಠಿ, ಧನಾತ್ಮಕ ನಡವಳಿಕೆಗಳು ನಿಮ್ಮ ಭವಿಷ್ಯವನ್ನು ನಿರ್ಮಿಸುತ್ತವೆ. ಸಮರ್ಪಣೆ ಮತ್ತು ಭಕ್ತಿಭಾವದಿಂದ ಆರೋಗ್ಯ ಸೇವೆ ಮಾಡಿ, ಸ್ವಂತ ಅಭಿವೃದ್ಧಿಯ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯ ಕಡೆಗೂ ಗಮನವಿಡಿ. ವೃತ್ತಿ ಸಂಹಿತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಗುರಿ ತಲುಪಿ. ಅದರ ಜೊತೆಗೆ ನಮ್ಮ ಸಂಸ್ಕೃತಿ, ನಾಗರಿಕತೆ, ಪರಂಪರೆ, ಹಿರಿಯರನ್ನು ಗೌರವಿಸಿ ಮತ್ತು ವಿಶೇಷವಾಗಿ ನಿಮ್ಮ ಈ ಸಾಧನೆಗೆ ಕಾರಣರಾದ ನಿಮ್ಮ ಪೋಷಕರು ಹಾಗೂ ಇಡೀ ದೇಶ ಹೆಮ್ಮೆ ಪಡುವಂತೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ಉತ್ತಮ ನಾಗರಿಕರಾಗಿ ಎಂದು ಅವರು ಕರೆ ನೀಡಿದರು.
ಪದವಿ ಪಡೆಯುವುದು ಒಂದು ಮೈಲುಗಲ್ಲು. ಆದರೆ, ಇದೇ ಕೊನೆಯಲ್ಲ. ನೈತಿಕತೆಗೆ ಪೂರಕವಾಗಿ ಸೇವೆ ಸಲ್ಲಿಸಿ. ಸತ್ಯ, ಸೇವೆ, ಮತ್ತು ಮನುಕುಲದ ಹಾಗು ಜೀವನದ ಸಂತೋಷದ ಅನ್ವೇಷಣೆಯಲ್ಲಿ ಜೀವನಕ್ಕೆ ಪ್ರಾಮುಖ್ಯತೆ ಇರಲಿ. ತಂದೆ-ತಾಯಿ, ಶಿಕ್ಷಕರು, ಸಹೋದ್ಯೋಗಿಗಳು, ಮಾತೃಭಾಷೆ, ಸಂಸ್ಕೃತಿ, ಪರಂಪರೆ, ಸಂವಿಧಾನಗಳ:್ನು ಗೌರವಿಸಿ. ಹೆಮ್ಮೆಯಿಂದ ದೇಶ ಸೇವೆ ಮಾಡಿ. ಜೀವನದಲ್ಲಿ ಯಶಸ್ವಿಯಾಗಲು ನಿರಂತರ ಪ್ರಯತ್ನ ಮಾಡಿ ಎಂದು ಅವರು ಹೇಳಿದರು.
21ನೇ ಶತಮಾನ ಭೌತಿಕ ಸೈಬರ್ ವ್ಯವಸ್ಥೆಗಳು ಅಂದರೆ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನದ ಸಮ್ಮಿಳನವಾಗಿದ್ದು, ರೋಬೊಟಿಕ್, ನ್ಯಾನೋ ಮತ್ತು ಲೇಸರ್ ತಂತ್ರಜ್ಞಾನಗಳು ಆರೋಗ್ಯ ಮತ್ತು ವೃತ್ತಿ ಶಿಕ್ಷಣದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಅಲ್ಲದೇ, ಔಷಧ, ದಂತವೈದ್ಯಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕೆ ಹಾಗೂ ಕೃಷಿಯ ಮೇಲೂ ಪರಿಣಾಮ ಬಿರುತ್ತಿವೆ. ರೋಗ ನಿರ್ಣಯ, ಶಸ್ತ್ರಚಿಕಿತ್ಸಾ ವಿಧಾನಗಳು, ಟೆಲಿಮೆಡಿಸೀನ್ ಸೇರಿದಂತೆ ನಾನಾ ಹೊಸ ಆವಿಷ್ಕಾರಗಳು, ಇವುಗಳ ಜೊತಗೆ ನಾಲ್ಕನೇ ಕೈಗಾರಿಕೆ ಕ್ರಾಂತಿಗಳಾದ, ಕೃತಕ ಬುದ್ದಿಮತ್ತೆ, ಯಾಂತ್ರಿಕೃತ ಭಾಷೆ, ಜೀನ್ ಥೆರಪಿ ನ್ಯಾನೋ ಚಿಕಿತ್ಸೆ, ಕಡಿಮೆ ನೋವಿನ ಚಿಕಿತ್ಸೆಗಳು, ಲ್ಯಾಪ್ರೋಸ್ಕೋಪಿಕ್, ರೋಬೋಟಿಕ್ ಸರ್ಜರಿ, ಎಂಡೋಸ್ಕೋಪಿ, ಲೇಸರ್ ಆಧಾರಿತ ಚಿಕಿತ್ಸಾ ವಿಧಾನಗಳು ಜಾಗತೀಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡುತ್ತಿವೆ. ಎಂ.ಆರ್.ಐ, ಸಿಟಿ ಸ್ಕ್ಯಾನ್, ಪೆಟ್ ಸ್ಕ್ಯಾನ್ ಗಳು ಚಿಕಿತ್ಸೆಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ಕೌಶಲ್ಯಗಳನ್ನು ಮತ್ತು ಸಾಮರ್ಥ್ಯವನ್ನು ಒತ್ತಿ ಹೇಳುವ ಮೂಲಕ ಹೊಸ ವಿಧಾನಗಳನ್ನು ಪರಿಚಯಿಸುತ್ತಿದೆ. ಡಿಜಿಟಲ್ ಮತ್ತು ಐಸಿಟಿ ತಂತ್ರಜ್ಞಾನಗಳು ಸರ್ಚ್ ಎಂಜಿನ್ ಗಳು ಯಾವಾಗ ಬೇಕಾದರೂ ಸ್ಮಾರ್ಟಫೋನ್ ಮೂಲಕ ಮಾಹಿತಿ ಪಡೆಯಲು ಅನುಕೂಲವಾಗಿವೆ. ಇದರಿಂದ ಜಾಗತಿಗವಾಗಿ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಬಳಸಿಕೊಳ್ಳಬಹುದು. ಈಗ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ನಾನಾ ಕೋರ್ಸುಗಳನ್ನು ಪೂರ್ಣಗೊಳಿಸಿರುವ ತಾವು ಈಗ ವಿಶ್ವಾದ್ಯಂತ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ಅರ್ಹರಾಗಿದ್ದೀರಿ ಎಂದು ಅವರು ಹೇಳಿದರು.
ಆಧುನಿಕ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ನಡುವೆಯೂ ಗ್ರಾಮೀಣ ಆರೋಗ್ಯ ವ್ವಸ್ಥೆಗಳಲ್ಲಿ ಇನ್ನೂ ಸುಧಾರಣೆಯಾಗಬೇಕಿದೆ. ವೈದ್ಯಕೀಯ ಸೌಲಭ್ಯಗಳು ರೋಗಿಗಳಿಗೆ ಕೈಗೆಟುಕಬೇಕಾಗಿದೆ. ಆದ್ದರಿಂದ ಸರಕಾರ ಆರೋಗ್ಯ ವಿಮೆ ಮತ್ತು ಉಚಿತ ಆರೋಗ್ಯ ಯೋಜನೆಗಳ ಮೂಲಕ ಅಗತ್ಯವಾಗಿರುವ ಜನರಿಗೆ ವೈದ್ಯಕೀಯ ಸೇವೆಗಳನ್ನು ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಮತ್ತು ಚಿಕಿತ್ಸೆ ಒದಗಿಸುಲು ಸರಕಾರ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿದೆ. ಸರಕಾರ ನಿಗದಿ ಪಡಿಸಿದ ದರಕ್ಕಿಂತಲೂ ಕಡಿಮೆ ಶುಲ್ಕ ಮತ್ತು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ನೀಡಿ ಮಾನವೀಯತೆ ತೋರಿದೆ.
ಸ್ವಾತಂತ್ರ‍್ಯ ಪೂರ್ವದಿಂದಲೂ ಬರಪೀಡಿತ ಹಣೆಪಟ್ಟಿ ಹೊಂದಿದ್ದ ವಿಜಯಪುರ ಜಿಲ್ಲೆಯಲ್ಲಿ 1910ರಲ್ಲಿ ಆರಂಭವಾದ ಬಿ.ಎಲ್.ಡಿ.ಇ ಸಂಸ್ಥೆ ಜಿಲ್ಲೆಯ ಆರ್ಥಿಕ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ನಾನಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ, ಕಲೆ, ವಿಜ್ಞಾನ, ಶಿಕ್ಷಣ, ಕಾನೂನು, ವಾಣಿಜ್ಯ, ನಿರ್ವಹಣೆ, ಫಾರ್ಮಸಿ, ನರ್ಸಿಂಗ್, ಎಂಜಿನಿಯರಿAಗ್, ಆಯುರ್ವೇದ, ಮತ್ತು ಈತರ ಆರೋಗ್ಯ ವಿಜ್ಞಾನ ಕೋರ್ಸುಗಳನ್ನು ನಡೆಸುವ ಮೂಲಕ ಶತಮಾನ ಪೂರೈಸಿದೆ. 113 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯಲ್ಲಿ ಈಗ 88ಕ್ಕೂ ಹೆಚ್ಚು ನಾನಾ ಶಿಕ್ಷಣ ಸಂಸ್ಥೆಗಳಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಸಂಸ್ಥೆಯ ಅಭಿವೃದ್ಧಿಯಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು, ದಕ್ಷ ಆಡಳಿತಗಾರ ಶ್ರೀ ಬಿ. ಎಂ. ಪಾಟೀಲರ ಪಾತ್ರ ಬಹುದೊಡ್ಡದಿದೆ.
1984ರಲ್ಲಿ ಸ್ಥಳೀಯ ಆಸ್ಪತ್ರೆಯಾಗಿ ಕಾರ್ಯಾರಂಭ ಮಾಡಿದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಈಗ ಈಗ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯವಾಗಿ ಮೇಲ್ಜರ್ಜೆಗೇರಿದ್ದು, ಕುಲಾಧಿಪತಿ ಎಂ. ಬಿ. ಪಾಟೀಲ ಅವರ ಸಮರ್ಥ ನೇತೃತ್ತದಲ್ಲಿ 21ನೇ ಶತಮಾನಕ್ಕೆ ಅಗತ್ಯವಾಗಿರುವ ಸೇವೆಗಳನ್ನು ಒದಗಿಸುವ ಮೂಲಕ ದೇಶದ ಮುಂಚೂಣಿ ವೈದ್ಯಕ್ಷೀಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸೂಪರ್ ಸ್ಪೇಷಾಲಿಟಿ ಕೋರ್ಸುಗಳು, ನುರಿತ ವೈದ್ಯಕೀಯ ಶಿಕ್ಷಣ ತಜ್ಞರು, ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಗ್ರಾಮೀಣ ಭಾಗದ ಜನರಿಗೆ ಅಗತ್ಯವಾಗಿರುವ ವೈದ್ಯಕೀಯ ಸೌಲಭ್ಯಗಳು, 15 ಕ್ಕೂ ಹೆಚ್ಚು ಸೂಪರ್ ಸ್ಪೇಷಾಲಿಟಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಇಲ್ಲಿ ಈಗ ತೆರೆದ ಹೃದಯ ಶಸ್ತ್ರಚಿಕಿತ್ಸೆ ಪ್ರಾರಂಭ ಮಾಡಿರುವುದು ಸಂತಸದ ವಿಷಯವಾಗಿದೆ. ಅಷ್ಟೇ ಅಲ್ಲ, ನೀರಾವರಿ ಕ್ಷೇತ್ರಕ್ಕೆ ಎಂ. ಬಿ. ಪಾಟೀಲರು ನೀಡಿರುವ ಕೊಡುಗೆ, ಅರಣ್ಯೀಕರಣಕ್ಕೆ ಮಾಡುತ್ತಿರುವ ಕಾಯಗಳನ್ನು ಪರಿಗಣಿಸಿ ಜನತೆ ಆಧುನಿಕ ಭಗೀರಥ, ಕೋಟಿ ವೃಕ್ಷ ವೀರ ಎಂದು ಹೆಮ್ಮೆಯಿಂದ ಕರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದೆಲ್ಲದರ ಪರಿಣಾಮವಾಗಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಎನ್.ಐ.ಆರ್.ಎಫ್ ಪಟ್ಟಿಯಲ್ಲಿ ದೇಶದಲ್ಲಿಯೇ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದಿದೆ. ಈಗ ಗುಣಮಟ್ಟದ ವೈದ್ಯಕೀಯ ಸೇವೆಗಾಗಿ ಎನ್.ಎ.ಬಿ.ಎಚ್. ಮಾನ್ಯತೆ ಸಿಕ್ಕಿರುವ ಉತ್ತರ ಕರ್ನಾಟಕದ ಏಕೈಕ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಓರ್ವ ವೈದ್ಯನಾಗಿರುವ ನನಗೂ ಹೆಮ್ಮೆಯ ವಿಷಯವಾಗಿದೆ. ಇದರ ಜೊತೆಗೆ ನ್ಯಾಕ್ ನಿಂದ ಎ ಗ್ರೇಡ್ ಲಭಿಸಿರುವುದು ಹಾಗೂ ದೇಶದ 150 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವುದು ಸಾಧನೆಗೆ ಗರಿ ಮೂಡಿಸಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸಮರ್ಥ ಆಡಳಿತಗಾರ, ಶಿಕ್ಷಣ ತಜ್ಞ, ಕೈಗಾರಿಕೋದ್ಯಮಿ, ಆರ್ಥಿಕ ತಜ್ಞ, ಸಮಾಜ ಸೇವಕ, ಪರೋಪಕಾರಿ ವ್ಯಕ್ತಿತ್ತವ ಹೊಂದಿರುವ ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ವಯಸ್ಸಿನಲ್ಲಿಯೂ ಅವರಲ್ಲಿರುವ ಉತ್ಸಾಹ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ತತ್ವಾದರ್ಶಗಳನ್ನು ಅಡಿಯಲ್ಲಿ ನಾವೂ ನಡೆಯುತ್ತೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಎಂ. ಬಿ. ಪಾಟೀಲ, ಮಾಜಿ ಸಚಿವ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ರಜಿಸ್ಟ್ರಾರ ಪ್ರೊ. ಆರ್. ವಿ. ಕುಲಕರ್ಣಿ, ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ ಉಪಸ್ಥಿತರಿದ್ದರು.