ದುಡಿದ ಹಣದಲ್ಲಿ 10 ಪೈಸೆಯಾದರೂ ದಾನ- ಧರ್ಮ ನೀಡಿ- ಶಾಮನೂರು ಶಿವಶಂಕರಪ್ಪ

ವಿಜಯಪುರ: ಮಾಡುವ ದುಡಿಮೆಯಲ್ಲಿ 10 ಪೈಸೆಯಾದರೂ ದಾನ ಧರ್ಮದ ಸೇವೆಗೆ ನೀಡಬೇಕು ಎಂದು ಮಾಜಿ ಸಚಿವ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.  

ನಗರದಲ್ಲಿ ನಡೆದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.

ಈಗ ಪದವಿ ಪಡೆದಿರುವ ವೈದ್ಯರು ತಾವು ಮಾಡುವ ದುಡಿಮೆಯಲ್ಲಿ ಹತ್ತು ಪೈಸೆಯಷ್ಟಾದರೂ ದಾನ ದರ್ಮದ ಸೇವೆಗೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಶಾಮನೂರು ಶಿವಶಂಕರಪ್ಪ

ವಿಶ್ವಾಸದಿಂದ ಜನಸೇವೆ ಮಾಡಿದರೆ ಎಲ್ಲರು ನಮ್ಮ ಕಾಯಕವನ್ನು ಗುರುತಿಸಿ ಗೌರವಿಸುತ್ತಾರೆ.  ಈಗಾಗಲೇ ನನಗೆ ಮೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ದೊರಕಿದ್ದು, ಇದು ನಾಲ್ಕನೇಯ ಗೌರವವಾಗಿದೆ. ಇದಕ್ಕೆಲ ನಾವು ಮಾಡುವ ಒಳ್ಳೆಯ ಕೆಲಸಗಳೇ ಕಾರಣ. ನಾನು ಏಳು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿಷ್ಠೆಯನ್ನು ಪರಿಗಣಿಸಿ ಪಕ್ಷ ಪ್ರತಿ ಬಾರಿ ನನಗೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.

ಈ ಹಿಂದೆ ಎಸ್. ನಿಜಲಿಂಗಪ್ಪನವರು ಅಧಿಕಾರದಲ್ಲಿದ್ದಾಗ ಬೆಳಗಾವಿ, ಕಲಬುರಗಿ, ದಾವಣಗೆರೆಗಳಿಗೆ ಮೇಡಿಕಲ್ ಕಾಲೇಜುಗಳನ್ನು ನೀಡಿದ್ದರು. ನಂತರ ವಿಜಯಪುರದಲ್ಲಿ ಬಿ.ಎಲ್.ಡಿ.ಇ ಮತ್ತು ಬಾಗಲಕೋಟೆಯಲ್ಲಿ ಬಿ.ವಿ.ವಿ.ಎಸ್ ಮೇಡಿಕಲ್ ಕಾಲೇಜುಗಳು ಆರಂಭವಾಗಿವೆ. ಹೆಚ್ಚೆಚ್ಚು ಕಾಲೇಜುಗಳು ಪ್ರಾರಂಭವಾದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತದೆ. ಈಗ ದೇಶ ಮತ್ತು ವಿದೇಶಗಳಲ್ಲಿ ಎಲ್ಲಿಯೇ ಹೋದರು ಇಲ್ಲಿನ ವೈದ್ಯರು ಸಿಗುತ್ತಾರೆ. ಇದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಎಂ. ಬಿ. ಪಾಟೀಲ, ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ರಜಿಸ್ಟ್ರಾರ ಪ್ರೊ. ಆರ್. ವಿ. ಕುಲಕರ್ಣಿ, ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌