ವಿಜಯಪುರ: ಶಿಕ್ಷಕಿಯ ಮಗನಿಗೆ ಐದು ಚಿನ್ನದ ಪದಕ ಸೇರಿದಂತೆ ಒಟ್ಟು 349 ವಿದ್ಯಾರ್ಥಿಗಳಿಗೆ ನಾನಾ ವೈದ್ಯಕೀಯ ಪದವಿಗಳನ್ನು ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಪ್ರಧಾನ ಮಾಡಲಾಯಿತು.
ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ, ಸಚಿವ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಮುಂತಾದವರು ಪಿ.ಎಚ್.ಡಿ, ಸ್ನಾತಕೋತ್ತರ, ಎಂ.ಬಿ.ಬಿ.ಎಸ್ ಸೇರಿದಂತೆ 349 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.
ಈ ಘಟಿಕೋತ್ಸವದಲ್ಲಿ 9 ಪಿ.ಎಚ್.ಡಿ, 113 ಸ್ನಾತಕೋತ್ತರ ಪದವಿ, 1 ಎಂ.ಸಿ.ಎಚ್, 4 ಪೆಲೋಶಿಪ್, 205 ಎಂ.ಬಿ.ಬಿ.ಎಸ್, 13 ಬಿ.ಎಸ್.ಸಿ(ಎಂ.ಐ.ಟಿ), 3 ಎಂ.ಎಸ್.ಸಿ ಹಾಗೂ 1 ಎಂ.ಎಚ್.ಎ ಪದವಿಗಳನ್ನು ಮತ್ತು 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಎಂ. ಬಿ. ಪಾಟೀಲ, ಸಚಿವ ಡಾ. ಶರಣಪ್ರಕಾಶ ಪಾಟೀಲ, ಮಾಜಿ ಸಚಿವ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ರಜಿಸ್ಟ್ರಾರ ಪ್ರೊ. ಆರ್. ವಿ. ಕುಲಕರ್ಣಿ, ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ ಉಪಸ್ಥಿತರಿದ್ದರು.
ಮಯಾಂಕ ಅರೋರಾ ಅವರಿಗೆ 5 ಚಿನ್ನದ ಪದಕ
ಎಂ.ಬಿ.ಬಿ.ಎಸ್ ವಿಭಾಗದಲ್ಲಿ 5 ಚಿನ್ನದ ಪದಕ ಪಡೆದ ಮಯಾಂಕ ಅರೋರಾ ಗಮನ ಸೆಳೆದರು.
ಕಾರ್ಯಕ್ರಮದ ಬಳಿಕ ಈ ಕುರಿತು ಸಂತಸ ಹಂಚಿಕೊAಡ ಮಯಾಂಕ ಅರೋರಾ, ಎರಡು ಚಿನ್ನದ ಪದಕ ನಿರೀಕ್ಷಿಸಿದ್ದೆ. ಆದರೆ, ಐದು ಚಿನ್ನದ ಪದಕ ಬಂದಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಬಿ.ಎಲ್.ಡಿ.ಇ ವಿವಿಯಲ್ಲಿರುವ ಕಲಿಕಾ ವಾತಾವರಣ, ಶಿಕ್ಷಕರ ಬೋಧನೆ, ಅತ್ಯುತಮ ಗ್ರಂಥಾಲಯ, ಸುಸಜ್ಜಿತ ಪ್ರಯೋಗಾಲಯ ಮತ್ತು ಆಸ್ಪತ್ರೆ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ತಂದೆ- ತಾಯಿಯ ಸಂಪೂರ್ಣ ಸಹಕಾರ ಈ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಹರಿಯಾಣಾದ ಸೋನಿಪತ ನಮ್ಮ ಊರು. ನನ್ನ ತಾಯಿ ಮೀನಾ ಶಿಕ್ಷಕಿಯಾಗಿದ್ದರೆ, ತಂದೆ ನವೀನ ಮೆಕ್ಯಾನಿಕಲ್ ಎಂಜಿನೀಯರ ಆಗಿದ್ದಾರೆ. ಬಾಲ್ಯದಿಂದಲೂ ಕಷ್ಟಪಟ್ಟು ಓದಿದ್ದೇನೆ. ಸತತ ಪರಿಶ್ರಮದಿಂದ ಈಗ ಉತ್ತಮ ಸಾಧನೆ ಮಾಡಿದ್ದು, ನನಗೆ ಸರಕಾರಿ ಕೋಟಾದಲ್ಲಿ ನಾಗ್ಪೂರ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಸೀಟು ಸಿಕ್ಕಿದೆ. ಅಲ್ಲಿಯು ಉತ್ತಮ ಸಾಧನೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಅರೀಬಾ ಅಹ್ಮದ ಮೂರು, ಡಾ. ಅನಘಾ ಕೃಷ್ಣನ್, ಡಾ. ಶುಭಂ ಸುಪ್ರೀಯಾ 1 ಚಿನ್ನದ ಪದಕ ಪಡೆದರೆ, ಡಾ. ಜ್ಯೋತಿ ಶರ್ಮಾ, ಡಾ. ಆಯೇಷಾ ಸಿದ್ದಿಕಿ, ಡಾ. ರಾಜನ ಕುಮಾರ, ಡಾ. ನೂಪುರ ದಹಿಯಾ ತಲಾ 1 ಚಿನ್ನದ ಪದಕ ಪಡೆದರು. ಡಾ. ಶಕ್ತಿಸ್ವರೂಪ ವಿಶ್ರಾ ನಗದು ಬಹುಮಾನ ಪಡೆದರು.