ವಿಜಯಪುರ: ನೇಕಾರರಿಗೆ 250 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜಾರಿ ಮಾಡುವ ಮೂಲಕ ಸರಕಾರ ದೀಪಾವಳಿ ಗಿಫ್ಟ್ ನೀಡಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಮತ್ತು ಎ. ಪಿ. ಎಂ. ಸಿ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ನಲ್ಲಿ ಘೋಷಿಸಿದಂತೆ ನೇಕಾರಿ 10 ಎಚ್ ಪಿ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈಗ ಈ ಕುರಿತು ಆದೇಶ ಹೊರಡಿಸಲಾಗಿದೆ. 10 ಎಚ್. ಪಿ. ವರೆಗೆ ನೇಕಾರರು ಪುಕ್ಕಟ್ಟೆಯಾಗಿ 250 ಯುನಿಟ್ ವರೆಗೆ ಬಳಸಬಹುದಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಫಿಕ್ಸ್ ಚಾರ್ಜ್ ಮತ್ತೀತರ ತೆರಿಗೆಗಳಿಂದ ವಿನಾಯಿತಿ ನೀಡಲಾಗಿದೆ. ಎಪ್. ಎ. ಸಿ. ಶುಲ್ಕಕ್ಕೂ ವಿನಾಯಿತಿ ಕೊಡಲಾಗಿದೆ. ಇದರಿಂದ ಎಲ್ಲ ನೇಕಾರರಿಗೆ ಸಹಾಯವಾಗಲಿದೆ. ಈ ಕುರಿತು ಸಿಎಂ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ನೇಕಾರರ ಪರವಾಗಿ ಮತ್ತು ಜವಳಿ ಇಲಾಖೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಅದೇ ರೀತಿ, 10 ರಿಂದ 20 ಎಚ್. ಪಿ. ವರೆಗೆ ವಿದ್ಯುತ್ ಬಳಸುವ ದೊಡ್ಡ ನೇಕಾರರಿಗೆ 500 ಯುನಿಟ್ ವರೆಗೆ ರೂ. 1.25ರ ವರೆಗೆ ದರ ನಿಗದಿ ಮಾಡಲಾಗಿದೆ. ಬಡ ನೇಕಾರರು 1 ರಿಂದ 10 ಎಚ್. ಪಿ. ವರೆಗೆ ಇರುತ್ತಾರೆ. ಸುಧಾರಿತ ನೇಕಾರರು 10 ರಿಂದ 20 ಎಚ್. ಪಿ ಮೀಟರ್ ವಿದ್ಯುತ್ ಬಳಸುತ್ತಾರೆ. ಆದರೆ, ಅಂಥ ನೇಕಾರರ ಸಂಖ್ಯೆ ಬಹಳ ಕಡಿಮೆ ಇದೆ. 100ಕ್ಕೆ ಶೇ. 80 ರಷ್ಟು ಜನ 10 ಎಚ್ ಪಿ ಒಳಗೆ ವಿದ್ಯುತ್ ಬಳಸುತ್ತಾರೆ. ಶೇ. 15 ರಿಂದ 20 ರಷ್ಟು ಜನ ಮಾತ್ರ 500 ಯುನಿಟ್ ವರೆಗೆ ಬಳಸುತ್ತಾರೆ. ಇದರಿಂದ ನೇಕಾರರಿಗೆ ಬಹಳ ದೊಡ್ಡಅನುಕೂಲವಾಗಲಿದೆ. ಹಳೆ ಸರಕಾರ ಹೋಗಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಫಿಕ್ಸ್ ಚಾರ್ಜ್ ಕರೆಂಟ್ ಬಿಲ್ ಹೆಚ್ಚಾಗಿರುವುದನ್ನು ಆಕರಣೆ ಮಾಡಿ ಬಿಲ್ ನೀಡಲಾಗಿತ್ತು. ಅದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಚುನಾವಣೆಯಲ್ಲಿ ನಾವು ಮಾಡಿರುವ ಘೋಷಣೆಯನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ. ಇದು ನೇಕಾರರಿಗೆ ದೀಪಾವಳಿಯ ಹೊಸ ದೊಡ್ಡ ಕೊಡುಗೆಯನ್ನು ಸರಕಾರ ನೀಡಿದೆ. ನೇಕಾರರೂ ಕೂಡ ಮನಃಪೂರ್ವಕವಾಗಿ ಸ್ವಾಗತ ಮಾಡಿದ್ದಾರೆ. ರಾಜ್ಯದಲ್ಲಿ 35 ರಿಂದ 40 ಸಾವಿರ ನೇಕಾರ ಕುಟುಂಬಗಳಿವೆ. ನೇಕಾರಿಕೆಯನ್ನೇ ನಂಬಿ ಈ ಕುಟುಂಬಗಳು ಜೀವನ ನಡೆಸುತ್ತಿವೆ. ನೇಕಾರರಿಗೆ 250 ಯುನಿಟ್ ವಿದ್ಯುತ್ ಉಚಿತ ನೀಡುವುರದಿಂದ ರಾಜ್ಯ ಸರಕಾರಕ್ಕೆ ರೂ. 120 ರಿಂದ ರೂ. 150 ಕೋ. ವರೆಗೆ ವೆಚ್ಚ ತಗುಲಲಿದೆ ಎಂದು ಅವರು ತಿಳಿಸಿದರು.
ವಿದ್ಯುತ್ ಬಳಕೆ ಅವರು ನೇಕಾರಿಕೆ ಉತ್ಪನ್ಗಳ ಉತ್ಪಾದನೆಯ ಮೇಲೆ ಅವಲಂಬಿತವಾಗಿದೆ. ಅವರು ಹೆಚ್ಚಿಗೆ ಮಾಡಿದರೂ ಮಾಡಬಹುದು. ಬೆಳಗಾವಿಯಲ್ಲಿ ಹೆಚ್ಚಿನ ನೇಕಾರರಿದ್ದಾರೆ. ಚಿಕ್ಕಬಳ್ಳಾಪುರ ಸುತ್ತಮುತ್ತ, ಚಿತ್ರದುರ್ಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರಿದ್ದಾರೆ ಎಂದು ಶಿವಾನಂದ ಎಸ್. ಪಾಟೀಲ ತಿಳಿಸಿದರು.
ನವೆಂಬರ 20ಕ್ಕೆ ವಿಜಯಪುರದಲ್ಲಿ ಸಹಕಾರಿ ಸಪ್ತಾಹ ಸಿಎಂ ಭಾಗಿ
ಇದೇ ವೇಳೆ ನವೆಂಬರ್ 20 ರಂದು ವಿಜಯಪುರದಲ್ಲಿ ಸಹಕಾರಿ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಬರಗಾಲದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಾರಿಗೆ ಸಚಿವ ನಿತೀನ ಗಡ್ಕರಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದರು.