ಯುವ ಸಂಶೋಧಕರು ನೈಜತೆ, ಗುಣಮಟ್ಟದ ಸಂಶೋಧನೆಗೆ ಒತ್ತು ನೀಡಬೇಕು- ಶಂಕರಗೌಡ ಸೋಮನಾಳ

ವಿಜಯಪುರ: ಸಂಶೋಧನೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಯುವ ಸಂಶೋಧಕರು ನೈಜತೆಗೆ ಮತ್ತು ಗುಣಮಟ್ಟದ ಸಂಶೋಧನೆಗೆ ಒತ್ತು ನೀಡಬೇಕು. ಇದಕ್ಕಾಗಿ ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ತಿಕೋಟಾ ತಾಲೂಕಿನ ತೊರವಿಯಲ್ಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 12 ದಿನಗಳ ಕಾಲ ನಡೆದ ಐ.ಸಿ.ಎಸ್‌.ಎಸ್‌.ಆರ್ ಪ್ರಾಯೋಜಿತ ಸಾಮರ್ಥ್ಯ ವೃದ್ಧಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಕಾರ್ಯಾಗಾರ ಯುವ ಸಂಶೋಧಕರಲ್ಲಿ ಗುಣಮಟ್ಟದ ಸಂಶೋಧನೆಗೆ ಒತ್ತು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.  ಸಂಶೋಧನೆ ಗುಣಮಟ್ಟ ಇಂದಿನ ದಿನಮಾನಗಳಲ್ಲಿ ಕುಸಿಯುತ್ತಿದೆ.  ವಿದ್ಯಾರ್ಥಿಗಳಲ್ಲಿ ಸಂಶೋಧನಾಸಕ್ತಿ ಮತ್ತು ಕೌಶಲ್ಯ ಕಡಿಮೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಈ ಕಾರ್ಯಾಗಾರದಲ್ಲಿ ನಾನಾ ರಾಜ್ಯಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮತ್ತು ಸಂಶೋಧನೆ ಕೇಂದ್ರಗಳ ಹಿರಿಯ ಪ್ರಾಧ್ಯಾಪಕರು ಶಿಬಿರಾರ್ಥಿಗಳಿಗೆ ಸಂಶೋಧನಾ ಹಂತಗಳು, ಕೃತಿಚೌರ್ಯ, ಸಂಶೋಧನೆ ಪ್ರಕಾರಗಳು, ಸಂಶೋಧನೆ ಪರಿಕಲ್ಪನೆಗಳು, ದತ್ತಾಂಶ ಸಂಗ್ರಹಣೆ ಸಾಧನಗಳು, ಮಾದರಿ ನಮೂನೆಗಳು, ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಸಾಧನಗಳ ಬಳಕೆ, ಲೇಖನಗಳ ಗುಣಮಟ್ಟದ ಬರವಣಿಗೆ ಮತ್ತು ಯುಜಿಸಿ ಅನುಮೋದಿಸಿದ ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸುವ ಬಗ್ಗೆ ಉಪನ್ಯಾಸ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಆರ್. ಆರ್. ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬ ಸಂಶೋಧಕರು ತಮ್ಮದೇ ಆದ ಬ್ಲಾಗ್‌ ಗಳನ್ನು ಹೊಂದುವುದು ಅತಿ ಮುಖ್ಯವಾಗಿದೆ.  ಬ್ಲಾಗ್‌ ನಲ್ಲಿ ಸಂಶೋಧನೆ ಕುರಿತು ಲೇಖನಗಳನ್ನು ಪ್ರಕಟಿಸಿದರೆ ಜಾಗತಿಕ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿರ್ದೇಶಕ ಪ್ರೊ. ಗವಿಸಿದ್ಧಪ್ಪ ಆನಂದಳ್ಳಿ ಕಾರ್ಯಾಗಾರದ ವರದಿಯನ್ನು ಮಂಡಿಸಿದರು.

ಈ ಕಾರ್ಯಾಗಾರದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಧ ಪ್ರೊ. ಪಿ. ಜಿ. ತಡಸದ, ವಿಶ್ವವಿದ್ಯಾಲಯದ ನಾನಾ ವಿಭಾಗಗಳ ಪ್ರಾಧ್ಯಾಪಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

 

ಕಾರ್ಯಾಗಾರದ ಸಹ ನಿರ್ದೇಶಕ ಡಾ. ಚಂದ್ರಶೇಖರ ಮಠಪತಿ ವಂದಿಸಿದರು.

Leave a Reply

ಹೊಸ ಪೋಸ್ಟ್‌