ವಿಜಯಪುರ: ರೈತರಿಗೆ ಕೃಷಿಗಾಗಿ ಇನ್ನು ಮುಂದೆ ಒಂದು ಗಂಟೆ ಹೆಚ್ಚಿಗೆ ವಿದ್ಯುತ್ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಡಿಸಿ, ಜಿ. ಪಂ. ಸಿ ಇ ಓ, ಎಸ್ಪಿ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿ ಸಭೆ ನಡೆಸಿ ಅವರು ಮಾತನಾಡಿದರು.
ಈವರೆಗೆ ರೈತರಿಗೆ ಐದು ಗಂಟೆ ತ್ರಿ- ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇನ್ನು ಮುಂದೆ ದಸರಾ ಕೊಡುಗೆಯಾಗಿ ಒಂದು ಗಂಟೆ ಹೆಚ್ಚಿಗೆ ವಿದ್ಯುತ್ ನೀಡಲಾಗುವುದು. ಇದರಿಂದ ರೈತರಿಗೆ ಆಯಾ ಪ್ರದೇಶಗಳಲ್ಲಿ ಲಭ್ಯತೆಗೆ ಅನುಗುಣವಾಗಿ ಹಾಗೂ ನಿಗದಿಯಿಂದ ಹಗಲು ಮತ್ತು ರಾತ್ರಿ ಸೇರಿ ಒಟ್ಟು ಆರು ಗಂಟೆ ವಿದ್ಯುತ್ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ಮುಂಚೆ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೈಕೊಟ್ಟಿದ್ದರಿಂದಾಗಿ ಬರ ಉಂಟಾಗಿದೆ. ಇದರ ಪರಿಣಾಮ ಜಲವಿದ್ಯುತ್ ಉತ್ತಾದನೆ ಕಡಿಮೆಯಾಗಿದೆ. ಪವನ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು ಕೇವಲ ಶೇ. 5ರಷ್ಟು ಮಾತ್ರ ಉತ್ಪಾದನೆಯಾಗುತ್ತಿದೆ. ಮೇಲಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ಗುಣಮಟ್ಟದ ಕಲ್ಲಿದ್ದಲು ದೊರೆಯದ ಕಾರಣ ಅಲ್ಲೂ ಕೂಡ ಉತ್ಪಾದನೆ ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 9 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಅದು 16000 ಮೆಗಾವ್ಯಾಟ್ ಗೆ ಹೆಚ್ಚಾಗಿದೆ. ಇನ್ನೊಂದೆಡೆ ಉತ್ಪಾದನೆಯೂ ಕುಸಿದಿರುವುದರಿಂದ ಒಟ್ಟಾರೆ ಸುಮಾರು 10 ಸಾವಿರ ಮೆಗಾವ್ಯಾಟ್ ಬೇಡಿಕೆ ಹೆಚ್ಚಾಗಿದೆ. ಸರಕಾರ ಕೂಡ ಕಲ್ಲಿದ್ದಲು ಆಮದಿಗೆ ನಿರ್ದರಿಸಿದ್ದು, ಶೀಘ್ರದಲ್ಲಿ ಗುಣಮಟ್ಟದ ಕಲ್ಲಿದ್ದಲು ಖರೀದಿ ಪ್ರಕ್ರಿಯೆ ಟೆಂಡರ್ ಕಾರ್ಯ ಮುಗಿಯಲಿದೆ ಎಂದು ಸಚಿವರು ತಿಳಿಸಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿದ್ಯುತ್ ಪೂರೈಕೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯುತ್ ಅಭಾವ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಖುದ್ದಾಗಿ ಪರಿಶೀಲಿಸಿ ನಿರ್ದೇಶನ ನೀಡಿರುವುದರಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಬೇಡಿಕೆಯಂತೆ ರಾತ್ರಿ ಎರಡು ಬ್ಯಾಚ್ ಹಾಗೂ ಹಗಲು ಎರಡು ಬ್ಯಾಚ್ ಸೇರಿದಂತೆ ಒಟ್ಟು ಐದು ಗಂಟೆಗಳ ಬದಲಿಗೆ ಆರು ಗಂಟೆಗಳ ಕಾಲ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು. ತೋಟದ ಮನೆಗಳ ಗೃಹ ಬಳಕೆಗಾಗಿ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ಪೂರೈಸುವಂತೆ ಸೂಚಿಸಿದ ಅವರು, ಗೃಹಬಳಕೆಗಾಗಿ ವಿದ್ಯುತ್ ಪೂರೈಸುವ ಅವಧಿಯಲ್ಲಿ ಟ್ರಾನ್ಸ್ಪಾರ್ಮರ್ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಲು ಈ ಸಮಯದಲ್ಲಿ ನೀರಾವರಿ ಪಂಪಸೆಟ್‌ಗಳನ್ನು ಚಾಲು ಮಾಡದೇ ರೈತರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾವಾರು ವಿದ್ಯುತ್ ಅಭಾವವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಬ್ಬು ನುರಿಸುವ ಹಂಗಾಮು ಆರಂಭದಿಂದ ಜಿಲ್ಲೆಯಲ್ಲಿ 174 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಿ ದೊರೆಯಲಿರುವುದರಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಿ ಈ ವಿದ್ಯುತ್ ಸದ್ಭಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ವಿದ್ಯುತ್ ಅಭಾವವಾಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ ನಾನಾ ವರ್ಗದ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವ ಕುರಿತು ಮೇಲ್ವಿಚಾರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ವಿದ್ಯುತ್ ಪೂರೈಕೆ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯರ್ನಿಹಣಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸದಸ್ಯರಾಗಿ ಹಾಗೂ ಕೆಪಿಟಿಸಿಎಲ್- ವಿದ್ಯುತ್ ಸರಬರಾಜು ಕಂಪನಿಗಳಿAದ ನೇಮಿಸಲ್ಪ ಜಿಲ್ಲಾ ನೋಡಲ್ ಅಧಿಕಾರಿ (ಮುಖ್ಯ ಅಭಿಯಂತರ)ಗಳು ಕಾರ್ಯನಿರ್ವಹಿಸಲಿದ್ದು, ಈ ಸಮಿತಿ ಜಿಲ್ಲೆಯಲ್ಲಿ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವ ಕುರಿತು ಮೇಲ್ವಿಚಾರಣೆ ನಡೆಸುವಂತೆ ಸಚಿವರು ಸೂಚನೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಜಿಲ್ಲಾ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಿ. ಕೆ. ಗೊಟ್ಯಾಳ, ಕೆಪಿಟಿಸಿಎಲ್ ಮುಖ್ಯ ಎಂಜಿನೀಯರ್ ಕಾಶೀನಾಥ ಹಿರೇಮಠ, ಹೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.