ವಿಜಯಪುರ: ನಾನಾ ನಿಗಮ ಮಂಡಳಿಗಳ ನೇಮಕಾತಿಗೆ ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ 28 ಹಾಗೂ 29 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದ್ದಾರೆ.
ನಗರದ ಗಾಂಧಿಚೌಕ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್ ಶಾರದಾ ಭವನದಲ್ಲಿ ಆಯೋಜಿಸಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವ್ಯವಸ್ತಿತ ಪರೀಕ್ಷೆಗಾಗಿ 21 ಮಾರ್ಗಾಧಿಕಾರಿಗಳ ತಂಡ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ವೀಕ್ಷಕರಂತೆ 64 ವೀಕ್ಷಕರು ಪ್ರತಿ ಪರೀಕ್ಷಾ ಕೇಂದ್ರಕ್ಕೆ 01 ಉಪ ಮುಖ್ಯ ಅಧೀಕ್ಷಕರು 01 ಪ್ರಶ್ನೆಪತ್ರಿಕೆ ಪಾಲಕರು ಮತ್ತು 01 ವಿಶೇಷ ಸ್ಥಾನಿಕ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ. ಅಕ್ಟೋಬರ್ 28ರಂದು ನಡೆಯುವ ಪತ್ರಿಕೆ-1 ಪರೀಕ್ಷೆಗೆ 14280 ಹಾಗೂ ಪತ್ರಿಕೆ-2 ಪರೀಕ್ಷೆ 14375, ಅಕ್ಟೋಬರ್ 29 ರಂದು ನಡೆಯುವ ಪತ್ರಿಕೆ-1 ಪರೀಕ್ಷೆ 24189 ಹಾಗೂ ಪತ್ರಿಕೆ-2 ಪರೀಕ್ಷೆಗೆ 24187 ಅಭ್ಯರ್ಥಿಗಳು ನೊಂದಾಯಿಸಿಕೊAಡಿದ್ದು, ಪರೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಕಾರ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲಾ ಖಜಾನೆಯಿಮದ ಪರೀಕ್ಷಾ ಕೇಂದ್ರಗಳಿಗೆ ರಹಸ್ಯ ಬಂಡಲ್‌ಗಳನ್ನು ರವಾನೆ ಮಾಡಲು ನಿಯೋಜಿಸಿದ ಮಾರ್ಗಾಧಿಕಾರಿಗಳು, ತಹಸೀಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ತಮ್ಮ ವಾಹನದಲ್ಲಿಯೇ ರಹಸ್ಯ ಬಂಡಲ್‌ಗಳನ್ನು ಸರಬರಾಜು ಮಾಡಬೇಕು. ಪರೀಕ್ಷೆ ಮುಗಿದ ನಂತರ ಮರಳಿ ಜಿಲ್ಲಾ ಖಜಾನೆಗೆ ಒಪ್ಪಿಸಬೇಕು. ಪರೀಕ್ಷೆ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಕೇಂದ್ರದ ಉಪ ಮುಖ್ಯ ಅಧೀಕ್ಷಕರು, ಸಹಮುಖ್ಯ ಅಧೀಕ್ಷಕರು, ವೀಕ್ಷಕರು ಹಾಗೂ ಜಾಗೃತ ದಳದ ಸದಸ್ಯರು ಎಲ್ಲ ಅಗತ್ಯ ಸಿದ್ಧತೆ ಕೈಗೊಂಡು ಯಾವುದೇ ಲೋಪವಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಅಕ್ಟೋಬರ್ 28 ಮತ್ತು 29 ರಂದು ಜಿಲ್ಲೆಯ 11 ತಾಲೂಕುಗಳ ಒಟ್ಟು 64 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅಕ್ಟೋಬರ್ 28 ರಂದು ಆಪ್ತ ಕಾರ್ಯದರ್ಶಿ- ಹಿರಿಯ ಸಹಾಯಕರು, ಪ್ರಥಮ ದರ್ಜೆ ಸಹಾಯಕ, ಸೇಲ್ಸ್ ಮೇಲ್ವಿಚಾರಕರು ಮುಂತಾದ ಸಮನಾದ ಹುದ್ದೆಗಳಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2. 30ರಿಂದ ಸಂಜೆ 4.30ರ ವರೆಗೆ ಪತ್ರಿಕೆ-2 ಪರೀಕ್ಷೆಗಳು ಹಾಗೂ ಅಕ್ಟೋಬರ್ 29 ರಂದು ದ್ವೀತಿಯ ದರ್ಜೆ ಸಹಾಯಕರು, ಕಿರಿಯ ಸಹಾಯಕರು ಮುಂತಾದ ಸಮನಾದ ಹುದ್ದೆಗಳಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿವೆ.
ಈ ಸಭೆಯಲ್ಲಿ ಖಜಾನಾಧಿಕಾರಿ ಹಣಮಂತ ಕಾತರಕಿ, ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಪಿ. ಹೊಸಮನಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಪ್ರಾಂಶುಪಾಲ ಸಿ. ಬಿ. ನಾಟಿಕಾರ ಸೇರಿದಂತೆ ನಾನಾ ತಹಸೀಲ್ದಾರರು, ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರು, ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.