ವಿಜಯಪುರ: ಜಿಲ್ಲೆಯ ಪೌರಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಜಾಗೃತಿ ಮೂಡಿಸಬೇಕು. ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿನ 2013ರ 3ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಮಾಜದ ಸ್ವಾಸ್ಥ ಕಾಪಾಡುವ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರ ಆರೋಗ್ಯ ತಪಾಸಣೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಮಿಕರನ್ನು ತಪಾಸಣೆಗೊಳಪಡಿಸಬೇಕು. ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಪೌರಕಾರ್ಮಿಕರಲ್ಲಿ ಅಗತ್ಯ ಜಾಗೃತಿ ಮೂಡಿಸುವ ಮೂಲಕ ಅವರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸುವಂತೆ ಅವರು ಸೂಚನೆ ನೀಡಿದರು.
ಪೌರಕಾರ್ಮಿಕರು, ಸ್ವಚ್ಛತಾ ಕೆಲಸಗಾರರಿಗೆ ಅತ್ಯುತ್ತಮ ಗುಣಮಟ್ಟದ ಪರಿಕರ ಹಾಗೂ ಸಮವಸ್ತ್ರ ಒದಗಿಸಬೇಕು. ಪೌರಕಾರ್ಮಿಕರಿಗೆ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸುರಕ್ಷಾ ಕಿಟ್-ಪರಿಕರ ಬಗ್ಗೆ ಪ್ರತಿ ಆರು ತಿಂಗಳಿಗೊಮ್ಮೆ ತರಬೇತಿ ಹಮ್ಮಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಖಾಯಂ ನೇರಪಾವತಿ-ಗುತ್ತಿಗೆ ಆಧಾರದ ಇರುವವರಿಗೆ ಕಡ್ಡಾಯವಾಗಿ ಇಎಸ್‍ಐ, ಪಿಎಫ್ ವಿಮೆ ಸೌಲಭ್ಯ ದೊರಕಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕೆಲಸಗಾರರ ಹೆಚ್ಚುವರಿ ಸಿಬ್ಬಂದಿ ಕನಿಷ್ಠ ವೇತನ ಪಾವತಿ ಮಾಡಬೇಕು. ನಿಯಮಿತ ಸಭೆಯ ಅನುಪಾಲನೆ ಮಾಡಬೇಕು. ಪೌರ ಕಾರ್ಮಿಕರ ಸುರಕ್ಷತಾ ಪರಿಕರ ನೀಡಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗೃಹ ಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ನಿರ್ಮಾಣ ಹಂತದ ಭೌತಿಕ ಆರ್ಥಿಕ-ಸಾಧನೆಯ ಗುರಿ ಮಾಹಿತಿ ಒದಗಿಸಬೇಕು. ಪೌರಕಾರ್ಮಿಕರಿಗೆ ಇಪಿಎಫ್ ಹಾಗೂ ಇಎಸ್‍ಐ ಪಾವತಿಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಮಿಕರ ವೇತನ ನಿಯಮಿತವಾಗಿ ಪಾವತಿಸುವಂತೆ ಕ್ರಮ ವಹಿಸಬೇಕು. ಮುಂಬರುವ ಸಭೆಯಲ್ಲಿ ಆರೋಗ್ಯ ಪರಿವೀಕ್ಷಕರು ಹಾಜರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಾಸ್ಕ್, ಕೈಗವಸ, ಗಮ್‍ಶೂ, ಕಿಟ್ ಸುರಕ್ಷಾ ಜಾಕೆಟ್ ಒದಗಿಸಬೇಕು. ಮುಂದಿನ ವರ್ಷಗಳಲ್ಲಿ ಒಂದೇ ಮಾದರಿಯ 2 ಸಮವಸ್ತ್ರ ನೀಡಲು ಕ್ರಮ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆದ್ಯತೆ ಮೇಲೆ ಆರೋಗ್ಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ವಿಜಯಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 315 ಖಾಯಂ ಪೌರ ಕಾರ್ಮಿಕರ ಪೈಕಿ 244 ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಿಎಲ್‍ಸಿ-128, ಎಎಚ್‍ಪಿ-116 ಒಟ್ಟು 244 ಮನೆಗಳು ಅನುಮೋದನೆಗೊಂಡು 46 ಮನೆಗಳು ಮುಕ್ತಾಯಗೊಂಡಿವೆ. ಬಾಕಿ ಉಳಿದ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 54 ಮನೆಗಳ ಹಕ್ಕಪತ್ರ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಇಂಡಿ ಮುಖ್ಯಾಧಿಕಾರಿ ಮಹಾಂತೇಶ, ತಾಳಿಕೋಟೆ ಮುಖ್ಯಾಧಿಕಾರಿ ಮೋಹನ್ ಜಾಧವ, ನಾಮನಿರ್ದೇಶಿತ ಸದಸ್ಯರಾದ ಬಾಬು ಸಜ್ಜನ, ಹಣಮಂತ ಕೊಡಗಾನೂರ, ಲಕ್ಷ್ಮೀ ಹಿಟ್ನಳ್ಳಿ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.