ವಿಜಯಪುರ: ರಾಜ್ಯದ ಪ್ರತಿಷ್ಠಿತ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಸಚಿವ ಶಿವಾನಂದ ಎಸ್. ಪಾಟೀಲ ಮತ್ತು ಉಪಾಧ್ಯಕ್ಷರಾಗಿ ರಾಜಶೇಖರ ಬಿ. ಗುಡದಿನ್ನಿ ಪುನರಾಯ್ಕೆಯಾಗಿದ್ದಾರೆ.
2023 ರಿಂದ 2028ರ ವರೆಗೆ ಐದು ವರ್ಷಗಳ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಜವಳಿ, ಕಬ್ಬು, ಸಕ್ಕರೆ ಅಭಿವೃದ್ಧಿ ಮತ್ತು ಎ.ಪಿಎಂ.ಸಿ ಸಚಿವ ಶಿವಾನಂದ ಎಸ್. ಪಾಟೀಲ ಮತ್ತು ಉಪಾಧ್ಯಕ್ಷರಾಗಿ ರಾಜಶೇಖರ ಬಿ. ಗುಡದಿನ್ನಿ ಅವಿರೋಧವಾಗಿ ಆಯ್ಕೆಯಾದರು.
ಶಿವಾನಂದ ಎಸ್. ಪಾಟೀಲ ಅವರು 1997 ರಿಂದ 2023ರ ವರೆಗೆ ಸತತವಾಗಿ ಆಯ್ಕೆಯಾಗುತ್ತಿರುವುದು ಗಮನಾರ್ಹವಾಗಿದೆ. ಸಚಿವರ ಅಧ್ಯಕ್ಷತೆಯಲ್ಲಿ ವಿಜಯಪುರ ಡಿಸಿಸಿ ಬ್ಯಾಂಕು ಸತತಚಾಗಿ ಲಾಭ ಗಳಿಸುತ್ತಿರುವುದು ಗಮನಾರ್ಹವಾಗಿದೆ.
ರಾಜಶೇಖರ ಬಿ. ಗುಡದಿನ್ನಿ ಅವರು 1996-97 ರಿಂದ ಸತತವಾಗಿ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ 3ನೇ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶೇಖರ ಅ. ದಳವಾಯಿ, ಬಿ. ಎಸ್. ಪಾಟೀಲ(ಯಾಳಗಿ), ಕಲ್ಲನಗೌಡ ಬಿ. ಪಾಟೀಲ, ಹಣಮಂತ್ರಾಯಗೌಡ ಆರ್. ಪಾಟೀಲ, ಸಂಯುಕ್ತಾ ಎಸ್. ಪಾಟೀಲ, ಗುರುಶಾಂತ ಎಸ್. ನಿಡೋಣಿ, ಸುರೇಶಗೌಡ ಐ. ಬಿರಾದಾರ, ಚಂದ್ರಶೇಖರಗೌಡ ಎಸ್. ಪಾಟೀಲ (ಮನಗೂಳಿ), ಅರವಿಂದ ಎ. ಪೂಜಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಭಾಗ್ಯಶ್ರೀ ಎಸ್ ಕೆ. ಈ ಚುನಾವಣೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ವೃತ್ತಿಪರ ನಿರ್ದೇಶಕ ಎಸ್. ಎಸ್. ಶಿಂಧೆ, ಆಡಳಿತ ಮಂಡಳಿ ಸಲಹೆಗಾರ ಜೆ. ಕೊಟ್ರೇಶಿ, ಮುಖ್ಯ ಕಾರ್ಯ ನಿರ್ವಾಹಕಣಾಧಿಕಾರಿ ಎಸ್. ಡಿ. ಬಿರಾದಾರ ಹಾಗೂ ಪ್ರಧಾನ ವ್ಯವಸ್ಥಾಪಕರು, ಉಪಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಚುನಾವಣೆ ಅಧಿಕಾರಿಯಾಗಿದ್ದರು.
ಇದಕ್ಕೂ ಮುಂಚೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು 11ರ ಪೈಕಿ 10 ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಎಲ್ಲ ನಿರ್ದೇಶಕರನ್ನು ಮತ್ತು ನಿರ್ದೇಶಕರ ಚುನಾವಣೆಯಲ್ಲಿ ಸಹಕರಿಸಿದ ಎಲ್ಲ ಪ್ರತಿನಿಧಿಗಳು, ಹಿರಿಯ ಸಹಕಾರಿಗಳು, ಬ್ಯಾಂಕಿನ ಸದಸ್ಯರೆಲ್ಲರನ್ನು ಹಾಗೂಚುನಾವಣಾಧಿಕಾರಿ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಬ್ಯಾಂಕು ಮುಂದಿನ ಅವಧಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುತ್ತ ಹೆಚ್ಚಿನ ಪರಿಶ್ರಮದಿಂದ ಕಾರ್ಯ ನಿರತರಾಗಬೇಕು. ಅಲ್ಲದೇ, ಜಿಲ್ಲೆಯ ಎಲ್ಲ ರೈತರಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಮತ್ತು ಬ್ಯಾಂಕಿನ ಗ್ರಾಹಕರಿಗೆ ಸಮಯೋಚಿತ ಸಮರ್ಪಕ ಸೇವೆ ನೀಡಲು ಶ್ರಮಿಸುವುದಾಗಿ ತಿಳಿಸಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್. ಎ. ಢವಳಗಿ ವಂದಿಸಿದರು.