ಡಾ. ಬಿದರಿ ಚೈಲ್ಡ್ ಅಕಾಡೆಮಿ ಆಶ್ರಯದಲ್ಲಿ 8 ರಿಂದ 16 ವರ್ಷದ ಮಕ್ಕಳಿಗಾಗಿ ಲಿಟಲ್ ಸಿಂಗಿಂಗ್ ಸ್ಟಾರ್ಸ್ ಗಾಯನ, ಚಿತ್ರಕಲೆ, ಆಶುಭಾಷಣ, ಆರೋಗ್ಯವಂತ ಮಗು ಸ್ಪರ್ಧೆ

ವಿಜಯಪುರ: ನಗರದ ಚಿಕ್ಕಮಕ್ಕಳ ಖ್ಯಾತ ತಜ್ಞ ಡಾ. ಎಲ್. ಎಚ್. ಬಿದರಿ ಅವರ ಮಹತ್ವಾಂಕ್ಷೆಯ ಡಾ. ಬಿದರಿ ಚೈಲ್ಡ್ ಅಕಾಡೆಮಿ ನವೆಂಬರ್ 19 ರಂದು ಲೋಕಾರ್ಪಣೆಯಾಗಲಿದ್ದು, ಇದರ ಅಂಗವಾಗಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಯ ಗುರಿಯೊಂದಿಗೆ ಈ ಸಂಸ್ಥೆ ತನ್ನ ಸೇವೆ ಪ್ರಾರಂಭಿಸಲಿದೆ.  ಇದರ ಮೊದಲ ಹಂತದ ಯೋಜನೆಯಲ್ಲಿ ಜಿಲ್ಲೆಯ ಮಕ್ಕಳಲ್ಲಿರುವ ಗಾಯನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 8 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಲಿಟಲ್ ಸಿಂಗಿಂಗ್ ಸ್ಟಾರ್ಸ್ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ.  ಈ ವಯೋಮಿತಿಯೊಳಗಿನ ಮಕ್ಕಳು ತಮ್ಮ ಹಾಡಿನ ಒಂದು ವಿಡಿಯೋವನ್ನು ವಾಟ್ಸ್ಪ್ ಮೂಲಕ ಮೊಬೈಲ್ ಸಂಖ್ಯೆ- 8951790555 ನಂಬರಿಗೆ ನವೆಂಬರ್ 8 ರೊಳಗಾಗಿ ಕಳುಹಿಸಿ ಕೊಡಬೇಕು.

ಖ್ಯಾತ ಗಾಯಕಿ ಮಾನಸಾ ಹೊಳ್ಳ ಮತ್ತು ಜೋಗಿ ಖ್ಯಾತಿಯ ಗಾಯಕಿ ಸುನಿತಾ ಅವರ ನೇತೃತ್ವದ ನಿರ್ಣಾಯಕರ ತಂಡ ಅರ್ಹ ಮಕ್ಕಳನ್ನು ಆಯ್ಕೆ ಮಾಡಿ ನವೆಂಬರ್ 15 ರಂದು ನಡೆಯುವ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಹಾಡಲು ಅವಕಾಶ ನೀಡಲಿದ್ದಾರೆ.  ನಂತರ ಸೆಮಿ-ಫೈನಲ್ ಮತ್ತು ಫೈನಲ್ ಸ್ಪರ್ಧೆ ನವೆಂಬರ್ 19ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ.  ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಲಾಗುವುದು.  ಇದರ ಜೊತೆ 8 ರಿಂದ 16 ವರ್ಷದ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಮತ್ತು ಹೈಸ್ಕೂಲ್ ಮಕ್ಕಳಿಗಾಗಿ ಆಶುಭಾಷಣ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸಲಾಗಿದೆ.  ಅಲ್ಲದೆ, ಬಿಪಿಎಲ್ ಕಾರ್ಡದಾರ ಮಕ್ಕಳಿಗಾಗಿ ಆರೋಗ್ಯವಂತ ಮಗು ಸ್ಪರ್ಧೆಯನ್ನು ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.

ಈ ಎಲ್ಲಾ ಸ್ಪರ್ಧೆಗಳ ಸಂಪೂರ್ಣ ವಿವರಣೆಗಳನ್ನು ವಿಜಯಪುರ ಸೆಂಟ್ರಲ್ ಯೂ-ಟ್ಯೂಬ್ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಪಡೆಯಬಹುದು ಅಥವಾ ಮೊ- 8951790555 ಗೆ ಕರೆಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಡಾ. ಎಲ್. ಎಚ್. ಬಿದರಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌