ವಿಜಯಪುರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನು ಹೋರಾಟ ಮಾಡಬೇಕು. ಕಾಂಗ್ರೆಸ್ಸಿಗರು ಒಗ್ಗಟ್ಟಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಳೆಯ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಎದುರಾಗಿದೆ. ಈಗಾಗಲೇ ನಮ್ಮ ರಾಜ್ಯ ಬಹಳ ಸಂಕಷ್ಟದಲ್ಲಿದೆ. ಕಾವೇರಿ ಭಾಗದ ರೈತರೂ ಕಷ್ಟದಲ್ಲಿದ್ದಾರೆ. ಹೀಗಾಗಿ ಕಾವೇರಿ ನೀರು ಬಿಡುಗಡೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ನಮ್ಮ ಸರಕಾರ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.
ಒಂದು ಕಡೆ ಸುಪ್ರೀಂ ಕೋರ್ಟ್ ಒತ್ತಡ ಮತ್ತು ಆದೇಶ, ಹೀಗಾಗಿ ಬಿಡುಗಡೆ ಮಾಡಬೇಕಾದ ಸಂದರ್ಭ ಎದುರಾಗಿದೆ. ಈ ಹಿಂದಿನ ಸರಕಾರಗಳಲ್ಲಿಯೂ ಈ ಪರಿಸ್ಥಿತಿ ಎದುರಾಗಿತ್ತು. ಸಿಎಂ ಇದ್ದಾರೆ. ಡಿಸಿಎಂ ಇದ್ದಾರೆ ಹೇಗೆ ನಿಭಾಯಿಸುತ್ತಾರೆ ನೋಡೋಣ ಎಂದು ಅವರು ಹೇಳಿದರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆಯೋ ಅಥವಾ ಕೇಂದ್ರ ಸರಕಾರ ಇದನ್ನು ಜಟೀಲ ಮಾಡುತ್ತಿದೆಯೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇರಬಹುದು. ನಾವು ಬಹಳ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ನಮ್ಮ ನೆರವಿಗೆ ಕೇಂದ್ರ ಸರಕಾರ ಬರಬೇಕು ಎಂದು ಅವರು ಹೇಳಿದರು.
ಕೇಂದ್ರಕ್ಕೆ ನಿಯೋಗ ಒಯ್ಯುತ್ತೀರಾ ಎಂಬ ಪ್ರಶ್ನೆಗೆ, ಅದು ಪ್ರಯೋಜನಕ್ಕೆ ಬರುವುದಿಲ್ಲ. ಈ ಹಿಂದೆ ಎಷ್ಟೋ ಸಲ ಹೋದರೂ ಪ್ರಯೋಜನವಾಗಿಲ್ಲ. ಇನ್ನು ನಾವು ಕಾನೂನು ಹೋರಾಟ ಮಾಡಬೇಕಷ್ಟೇ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೃಹ ಸಚಿವರ ಮನೆಯಲ್ಲಿ ಸಭೆಯ ಕುರಿತು ನಾನು ಏನು ಉತ್ತರಿಸಬೇಕು. ನಾನೂ ಆ ಸಭೆಯಲ್ಲಿದ್ದೆ ಎಂದು ತಿಳಿಸಿದ ಅವರು, ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿದೆಯಾ ಎಂಬ ಪ್ರಶ್ನೆಗೆ, ನಮ್ಮಲ್ಲಿ ಒಗ್ಗಟ್ಟಿದೆ ಎಂಬ ಕಾರಣಕ್ಕೆ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಲೆಕ್ಕದಲ್ಲಿ ಗೊಂದಲ ಎಂಬುವುದೇ ಇಲ್ಲ. ಅದು ಆಂತರಿಕ ವಿಚಾರ. ಅವರವರು ಚರ್ಚೆ ಮಾಡುತ್ತಿರುತ್ತಾರೆ. ಇದನ್ನು ಗೊಂದಲ ಎಂದು ಹೇಳಲು ಆಗುವುದಿಲ್ಲ. ಸಿಎಂ ಮತ್ತು ಡಿಸಿಎಂ ಮಧ್ಯೆ ಗೊಂದಲ ಎಂಬುದು ಇಲ್ಲ ಎಂದು ಹೇಳಿದರು.
ಡಿಸಿಎಂ ಡಿ. ಕೆ. ಶಿವಕುಮಾರ ಮತ್ತು ತಮ್ಮ ಮಧ್ಯೆ ಇರುವ ಮುಸುಕಿನ ಗುದ್ದಾಟದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಬಿಟ್ಟು ಬೇರೆ ವಿಷಯ ಕೇಳಿದರೆ ನಾನು ಹೇಳುತ್ತೇನೆ. ಈಗ ಒಂದು ವಾರದಿಂದ ಇದನ್ನೇ ಹೇಳುತ್ತಿದ್ದೇನೆ. ನೀವು ಅದನ್ನೇ ಮತ್ತೆ ಮತ್ತೆ ಕೇಳುತ್ತಿದ್ದೀರಿ. ಇದನ್ನು ಬಿಟ್ಟು ಬೇರೆ ಏನಾದರೂ ಕೇಳಿ. ದಯವಿಟ್ಟು ಪದೇ ಪದೇ ಇದನ್ನೇ ಕೇಳಬೇಡಿ. ಎಲ್ಲಿ ಹೋದರೂ ಇದನ್ನೇ ಕೇಳುತ್ತಾರೆ. ಇದಕ್ಕೆ ಎಷ್ಟು ಸಲ ಉತ್ತರ ಕೊಡಬೇಕು. ನೀವೂ ಎಲ್ಲ ನೋಡಿರುತ್ತೀರಿ. ಉತ್ತರ ಕೊಟ್ಟಾಗಿದೆ ಎಂದು ಹೇಳಿದರು.
ಸಿಎಂ ಬದಲಾವಣೆ ಕೆಲವು ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಮ್ಮ ಹೈಕಮಾಂಡಿಗೆ ಬಿಟ್ಟ ವಿಚಾರ. ಅದನ್ನು ಬದಲಾವಣೆ ಮಾಡುವ ಶಕ್ತಿ ಇರಲಿ ಇನ್ನಾವುದೇ ವಿಚಾರ ಇರಲಿ. ಈ ವಿಷಯ ಕುರಿತು ಮಾತನಾಡುವ ಶಾಸಕರನ್ನೇ ಕೇಳಿ. ಆ ಶಾಸಕರೇ ಸರಿಯಾಗಿ ಉತ್ತರ ಕೊಡುತ್ತಾರೆ ಎಂದು ಅವರು ತಿಳಿಸಿದರು.
ಡಿಕೆಶಿ ಆದಷ್ಟು ಬೇಗ ರಾಜೀನಾಮೆ ಕೊಡುತ್ತಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆಯ ಕುರಿತು ಪ್ರಶ್ನಿಸಿದಾಗ ಅದನ್ನು ಅವರನ್ನೇ ಕೇಳಿ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಂಗಮೇಶ ಬಬಲೇಶ್ವರ, ಡಾ. ಗಂಗಾಧರ ಸಂಬಣ್ಣಿ, ಸೋಮನಾಥ ಕಳ್ಳಿಮನಿ, ಮೆಹಬೂಬ್ ತಾಂಬೋಳಿ ಮುಂತಾದವರು ಉಪಸ್ಥಿತರಿದ್ದರು.