ವಿಜಯಪುರ: ಮಕ್ಕಳ ಖ್ಯಾತ ಸಾಹಿತಿ ಪರಪ್ಪ ಗುರುಪಾದಪ್ಪ ಸಿದ್ದಾಪುರ, ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅಪ್ಪಣ್ಣ ಮಾರುತಿ ಮದರಿ, ಹಾಗೂ ಉರ್ದು ಪತ್ರಕರ್ತ ರಫೀ ಭಂಡಾರಿ ಸೇರಿದಂತೆ ಒಟ್ಟು 68 ಜನರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಕುರಿತು ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ನಾನಾ ಕ್ಷೇತ್ರಗಳ ಸಾಧಕರಿಗೆ 2023ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.
ಡಾ. ಫ. ಗು. ಸಿದ್ದಾಪುರ(ಸಾಹಿತ್ಯ ಕ್ಷೇತ್ರ)
ಡಾ. ಫ. ಗು. ಸಿದ್ದಾಪುರ ಅವರು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದವರಾಗಿದ್ದು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ. 01.06.1958ರಲ್ಲಿ ಬಸವನ ಬಾಗೇವಾಡಿಯಲ್ಲಿ ಜನಿಸಿರುವ ಅವರು ಮುಳವಾಡ ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವತ್ತರಾಗಿದ್ದಾರೆ. 32 ಸಾಹಿತ್ಯ ಕೃತಿಗಳನ್ನು ರಚಿಸಿರುವ ಅವರು 20 ಕೃತಿಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಇವರು ರಚಿಸಿರುವ 15 ಕವಿತೆಗಳು ನಾನಾ ಪುಸ್ತಕಗಳಲ್ಲಿ ಪಠ್ಯಗಳಲ್ಲಿ ಪ್ರಕಟವಾಗಿವೆ. ಎಂಟು ನಾನಾ ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ 16 ಪುರಸ್ಕಾರ ಮತ್ತು ಗೌರವಗಳೂ ಲಭಿಸಿವೆ. ಅಷ್ಟೇ ಅಲ್ಲ, ಇವರು ರಚಿಸಿರುವ ನೂರಾರು ಕತೆಗಳು, ಲೇಖನಗಳು ನಾನಾ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಆಕಾಶವಾಣಿ ಕೇಂದ್ರಗಳಲ್ಲಿಯೂ ಪ್ರಸಾರವಾಗಿವೆ. ನಾನಾ ಸಂಘ- ಸಂಸ್ಥೆಗಳ ಅಜೀವ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಇವರು ಸೇವೆ ಸಲ್ಲಿಸಿದ್ದು, ನಾನಾ ಸಾಹಿತ್ಯ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೋಂಡಿದ್ದಾರೆ.
ಎ. ಎಂ. ಮದರಿ(ಸಂಕೀರ್ಣ ಕ್ಷೇತ್ರ)
ಅಪ್ಪಣ್ಣ ಮಾರುತಿ ಮದರಿ 01.04.1952ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಣ್ಣ ಹಳ್ಳಿ ಮದರಿಯಲ್ಲಿ ಜನಿಸಿದ್ದಾರೆ. ಹಿಂದುಳಿದ ಗೊಂದಲಗೇರಿ ಅಲೆಮಾರಿ ಸಮುದಾಯಕ್ಕೆ ಸೇರಿರುವ ಇವರು ಪ್ರೌಢಶಾಲೆಯ ಶಿಕ್ಷಕರಾಗಿ, ಟ್ರೇಜರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಕಥೆ, ಕವನ ಬರೆಯುವುದು, ನಾಟಕಗಳನ್ನು ರಚಿಸಿದ್ದಾರೆ. ವೈಚಾರಿಕ ಲೇಖಕರಾಗಿರುವ ಇವರಿಗೆ ಐದು ನಾನಾ ಪ್ರಶಸ್ತಿಗಳು ದೊರೆತಿವೆ.
ರಫೀ ಭಂಡಾರಿ(ಮಾಧ್ಯಮ ಕ್ಷೇತ್ರ)
ರಫೀ ಅಹ್ಮದ ಮೊಹಮ್ಮದ ಹಾಶಿಂ ಭಂಡಾರಿ(65) ವಿಜಯಪುರ ನಗರ ನಿವಾಸಿಯಾಗಿದ್ದು, ಕಳೆದ 37 ವರ್ಷಗಳಿಂದ ಡೇಲಿ ಸಲಾರ ಉರ್ದು ದಿನಪತ್ರಿಕೆಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನಾ ವಿವಿಗಳ ಸಿಂಡಿಕೇಟ್ ಸದಸ್ಯರಾಗಿ, ಉರ್ದು ಅಕಾಡೆಮಿ ಸದಸ್ಯರಾಗಿ, ಕಾನಿಪ ಜಿಲ್ಲಾಧ್ಯಕ್ಷರಾಗಿ, ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಏಳು ನಾನಾ ಪ್ರಶಸ್ತಿಗಳನ್ನು ಪಡೆದಿರುವ ಇವರು ನಾನಾ ಸಮ್ಮೇಳನಗಳಲ್ಲಿಯೂ ಪಾಲ್ಗೋಂಡಿದ್ದಾರೆ.
ಬಸವ ನಾಡಿನ ಎಲ್ಲ ಸಾಧಕರಿಗೆ ಬಸವನಾಡು ವೆಬ್ ವತಿಯಿಂದ ಅಭಿನಂದನೆಗಳು.