ಉದ್ಯಮಿಯಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಠಿಸಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು- ಎಚ್. ಕೆ. ಪಾಟೀಲ

ವಿಜಯಪುರ: ಉದ್ಯಮಿಯಾಗಿ ಹೆಚ್ಚೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ಕರೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭ ಮತ್ತು ವಿಜಯಪುರ ನಗರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ ಆಂಗ್ಲ ಮಾಧ್ಯಮ ಶಾಲೆಯ ಕಟ್ಡಡ ಮತ್ತು ವಿದ್ಯಾರ್ಥಿ ವಸತಿ ನಿಲಯದ ಕಟ್ಡಡದ ಅಡಿಗಲ್ಲು ಹಾಗೂ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಟ್ಟಿನಹಳ್ಳಿ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕೆ ಎಚ್. ಕೆ. ಪಾಟೀಲ ಶಂಕುಸ್ಥಾಪನೆ ನೆರವೇರಿಸಿದರು

ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ರಚನಾತ್ಮಕ ಕಾರ್ಯಕ್ರಮ ಮಾಡುವ ಜನ ಕಡಿಮೆ ಇದ್ದಾರೆ. ಹಾಸ್ಟೇಲ್ ಮತ್ತು ಶಾಲೆಗಳನ್ನು ಕಟ್ಟಬೇಕು. ಸಂಸ್ಥೆ ಸ್ಥಾಪಿಸಿ ಅವುಗಳನ್ನು ನಡೆಸಬೇಕು. ನಿಸ್ವಾರ್ಥಿಗಳಿಂದ ಮಾತ್ರ ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವ ಇಂಥ ಕಾರ್ಯಗಳನ್ನು ಮಾಡಲು ಸಾಧ್ಯ. ಆಡಳಿತ ಮಂಡಳಿ ಸಮಾಜದ ಆಸ್ತಿ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇವರ ಕಾಯಕಕ್ಕೆ ಸದಸ್ಯರ ಬೆಂಬಲ ಅಗತ್ಯ. ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ವಿಶ್ವಾಸ ವ್ಯಕ್ತಪಡಿಸಿದರೆ ಕೆಲಸ ಮಾಡುವವರಿಗೆ ಪ್ರೋತ್ಸಾಹ ಸಿಗುತ್ತದೆ. ಸದಸ್ಯರ ಸಂಪೂರ್ಣ ಸಹಕಾರದಿಂದ ಇಂಥ ಯಶಸ್ವಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲು ಕಾರಣವಾಗುತ್ತವೆ ಎಂದು ಅವರು ಹೇಳಿದರು.

ನಮ್ಮಲ್ಲಿ ಬಹಳಷ್ಟು ಜನ ನೌಕರಿಗಾಗಿ ಆಸೆ ಪಡುತ್ತಾರೆ. ಆದರೆ, ಅದರ ಬದಲು ಸ್ವಯಂ ಉದ್ಯೋಗದ ಕಡೆಯೂ ಒಲವು ಬೆಳೆಸಿಕೊಂಡು ನಾವೂ ಸ್ವಾವಲಂಬಿಯಾಗಿ ಉದ್ಯೋಗದಾತರಾಗಬೇಕು. ಹಣಕಾಸು ಸಂಸ್ಥೆಯಿಂದ ಶೇ. 50 ರಷ್ಟು ಜನರಿಗೆ ಸಾಲ ನೀಡಿದರೆ, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಹಾಗೂ ಉದ್ಯೋಗ ಸೃಷ್ಠಿಸುವವರಿಗೆ ಶೇ. ಶೇ. 50 ರಷ್ಟು ಸಾಲ ನೀಡಬೇಕು. ಇದರಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದ ಅವರು, ಈ ಹಿಂದೆ ಸಂಸದರಾಗಿದ್ದ ರಾಮಪ್ಪ ಬಿದರಿ ಅವರ ಮಾನವೀಯ ಮೌಲ್ಯಗಳುಳ್ಳ ರಾಜಕಾರಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಈಗ ಹರಿಹರದ ಶ್ರೀ ವೇಮನಾನಂದ ಸ್ವಾಮೀಜಿಗಳು ನಮಗೆಲ್ಲರಿಗೂ ಸ್ಪೂರ್ತಿ, ಪ್ರೋತ್ಸಾಹ, ಮಾರ್ಗದರ್ಶನದ ಮಾಡುವ ಮೂಲಕ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ದರ್ಮ ಜಾಗೃತಿ, ದೇವಸ್ಥಾನ ನಿರ್ಮಾಣ, ಮಲ್ಲಮ್ಮಳ ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ ಸಚಿವರು ಎಂದು ತಿಳಿಸಿದರು.

 

ಇದಕ್ಕೂ ಮುಂಚೆ ಹಿಟ್ಟಿನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಕುಲದೇವತೆಯಾದ ಹೇಮರಡ್ಡಿ ಮಲ್ಲಮ್ಮ ನಮ್ಮ ಬದುಕು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ಸಮಾಜ ಹೇಗಿರಬೇಕು? ಮನೆತನ ಹೇಗಿರಬೇಕು? ಅಣ್ಣ- ತಮ್ಮಂದಿರು ಹೇಗಿರಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ. ಈಗ ಸ್ವಾರ್ಥ ಭಾವನೆಗಳಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಸರ್ವಾಂಗೀಣ ಅಭಿವೃದ್ಧಿಗೂ ಹಿನ್ನೆಡೆಯಾಗುತ್ತಿದೆ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಹೇಳಿದರು.

ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಶ್ರದ್ಧೆ ಭಕ್ತಿಯಿಂದ ಮಲ್ಲಮ್ಮನವರ ದೇವಸ್ಥಾನ, ಹಾಸ್ಟೇಲ್ ಮತ್ತು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ತಂದೆ- ತಾಯಿ ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಾಗಿದ್ದರು.  ಮಲ್ಲಿಕಾರ್ಜುನ ಶಿವನ ಪ್ರತಿರೂಪವಿದ್ದಂತೆ. ಹೀಗಾಗಿ ಮಲ್ಲಿಕಾರ್ಜುನ ಗುಣಗಳು ಹೇಮರಡ್ಡಿ ಮಲ್ಲಮ್ಮ ಅವರಲ್ಲಿದ್ದವು. ಶ್ರದ್ದಾಭಕ್ಕಿಯಿಂದ ಶಿವನ ಆರಾಧಕರಾಗಿದ್ದ ಅವರು ಸಮೃದ್ಧಿಯ ಸಂಕೇತವಾಗಿದ್ದಾರೆ. ವಿಜಯಪುರದಲ್ಲಿ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು ಕಾಳಜಿ, ಬದ್ಧತೆಯಿಂದ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ನಾನು ಎಲ್ಲ ಸಮುದಾಯಗಳಿಗೆ ನಿವೇಶನ ಒದಗಿಸಿ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಇನ್ನು ಮುಂದೆಯೂ ಸಚಿವನಾಗಿ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷನಾಗಿ ಸಕಲ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಂಬರುವ ದಿನಗಳಲ್ಲಿ ಕೃತಕ ಬುದ್ದಿಮತ್ತೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಆದರೂ, ಮಾನವೀಯ ಶಿಕ್ಷಣ ಮತ್ತು ಸೇವೆಗೆ ಎಲ್ಲ ಕಾಲದಲ್ಲೂ ಅದರದೇ ಆದ ಮಹತ್ವ ಇದ್ದೇ ಇರುತ್ತದೆ. ಹೀಗಾಗಿ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಅವರು ಶುಭ ಕೋರಿದರು.

ಈ ಸಂದರ್ಭದಲ್ಲಿ ಹರಿಹರ ಎರೇಹೊಸಳ್ಳಿ ಶ್ರೀ ಮಹಾಯೋಗಿ ವೇಮನ ಸಂಸ್ಥಾನಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸಿ. ಎಸ್. ನಾಡಗೌಡ, ವಿಠ್ಠಲ ಧೋಂಡಿಬಾ ಕಟಕದೊಂಡ, ಬೆಂಗಳೂರಿನ ಕರ್ನಾಟಕ ರಡ್ಡಿ ಜನಸಂಘದ ನಿರ್ದೇಶಕರಾದ ಎನ್. ಶೇಕರರಡ್ಡಿ, ಕೃಷ್ಣಾರಡ್ಡಿ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಮುಖಂಡರಾದ ಸುರೇಶ ಸಿ. ದೇಸಾಯಿ, ಎಚ್. ಆರ್. ಮಾಚಪ್ಪನವರು, ಕೆ. ಬಿ. ಪಾಟೀಲ ಶಿರಬೂರ, ಡಾ. ಎಚ್. ವಿ. ಕರಿಗೌಡರ, ಆರ್. ಪಿ. ಕೊಡಬಾಗಿ, ಬಿ. ಎಸ್. ಬಿರಾದಾರ, ಎಸ್. ಎಲ್. ಜೀರಗಾಳ, ಕೆ. ಬಿ. ಪಾಟೀಲ, ಎಚ್. ಆರ್. ಬಿರಾದಾರ, ಬಿ. ಎಸ್. ಪಾಟೀಲ ಯಾಳಗಿ, ಹಣಮಂತರಾಯಗೌಡ ಪಾಟೀಲ ಪಡಗಾನೂರ, ಅಶೋಕ ಮಲಘಾಣ, ರಮೇಶ ಸೂಳಿಕೇರಿ, ಎಚ್. ಎಸ್. ಕೋರಡ್ಡಿ, ಯೋಗೇಶ್ವರಿ ಮಾತಾಜಿ, ಸೋಮನಾಥ ಕಳ್ಳಿಮನಿ, ಪ್ರಭುಗೌಡ ಲಿಂಗದಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌