ವಿಜಯಪುರ: ಕಾವೇರಿ ಜಲವಿವಾದ ಸೇರಿದಂತೆ ಅಂತಾರಾಜ್ಯ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರಕ್ಕೆ ಕಾಜಳಿ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಅತ್ಯಂತ ನಿರ್ಲಕ್ಷ್ಯ ನೀತಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಯಾವುದೇ ರೀತಿಯ ಕಳಕಳಿ, ಕಾಳಜಿ, ಆತುರ ಎಲ್ಲಿಯೂ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ 215ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ ಎಂದು ರಾಜ್ಯ ಸರಕಾರ ಘೋಷಣೆ ಮಾಡಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆಯೇ ಈ ಆದೇಶ ಹೊರಡಿಸಲಾಗಿದೆ. ನಮ್ಮ ಕಾವೇರಿ ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣ ಮುಂಬರುವ ದಿನಗಳಲ್ಲಿ ಬೆಂಗಳೂರಿನ ಜನತೆಗೆ ಕುಡಿಯಲು ಪೂರೈಸಲು ಸಾಧ್ಯತೆಯ ಬಗ್ಗೆಯೂ ಆತಂಕವಿದೆ. ಆದರೆ, ಕಾವೇರಿ ನೀರು ನಿರ್ವಹಣೆ ಸಮಿತಿ 2600 ಕ್ಯೂಸೆಕ್ ನೀರು ಎಂದು ಆದೇಶ ಮಾಡಿದೆ. ಅವುಗಳ ಬಗ್ಗೆ ಕೇಂದ್ರ ಸರಕಾರ ಯಾವುದೇ ರೀತಿಯಲ್ಲಿ ಗಮನ ಹರಿಸುತ್ತಿಲ್ಲ. ಅತ್ಯಂತ ದುರ್ದೈವದ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರು ಈ ದಿಸೆಯಲ್ಲಿ ಲಕ್ಷ್ಯ ವಹಿಸಬೇಕು. ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ದೊಡ್ಡ ಸಮಸ್ಯೆಗಳನ್ನು ಅವರು ಈಗಲೇ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಒಕ್ಕೂಟ ರಾಜಕೀಯ ವ್ಯವಸ್ಥೆ ನಮ್ಮಲ್ಲಿದೆ. ಇದರಲ್ಲಿ ಎಲ್ಲ ರಾಜ್ಯ ಸರಕಾರಗಳು ಮತ್ತು ಎಲ್ಲ ರಾಜ್ಯ ಸರಕಾರಗಳ ಜನ ಕೇಂದ್ರ ಸರಕಾರದ ಬಗ್ಗೆ ವಿಶ್ವಾಸ ಕಳೆದುಕೊಳ್ಳಬಾರದು. ಆ ದಿಸೆಯಲ್ಲಿ ಅವರು ಕೆಲಸ ಮಾಡಲಿ. ಇಲ್ಲದೇ ಹೋದರೆ ಎಲ್ಲರೂ ಬಹಳ್ಷಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ 2600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂಬ ಸಮಿತಿಯ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು. ಆ ಆದೇಶವನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ನಿಯೋಗವನ್ನು ತೆಗೆದುಕೊಂಡು ಹೋಗಬೇಕು. ನಮ್ಮ ಮುಖ್ಮಯಂತ್ರಿಗಳು ಈ ನಿಟ್ಟಿನಲ್ಲಿ ಪ್ರಧಾನಿಯನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ನೀರಾವರಿ ಮಂತ್ರಿಗಳು ಪ್ರಯತ್ನವನ್ನು ಮಾಡಿದರು. ಆದರೆ, ಯಾವುದೇ ಕಾರಣಕ್ಕೂ ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾದ್ಯ ಸರಕಾರ ವಿಫಲವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕರ್ನಾಟಕದ 28 ಜನ ಸಂಸದರು ಏನು ಮಾಡುತ್ತಿದ್ದಾರೆ? ಅದು ವಿಫವಾಗಿದೆಯಾ? ಬರ ಬಿದ್ದಿದೆ ಎಂದು ನಾವು ಘೋಷಣೆ ಮಾಡಿದಾಗಿಯೂ ಕೂಡ 2600 ಕ್ಯೂಸೆಕ್ ನೀರು ಬಿಡುವಂತೆ ನೀವು ಆದೇಶ ಮಾಡುತ್ತಿರಲ್ಲ. ಜನರಿಗೆ ಏನು ಹೇಳತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರ
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 1 ರಂದು ಮಾಡಲಾಗುತ್ತದೆ ಎಂದು ಈ ಮುಂಚೆ ತಿಳಿಸಲಾಗಿತ್ತು. ಆದರೆ, ನನಗೆ ನಿನ್ನೆ ಬಂದಿರುವ ಮಾಹಿತಿಯಂತೆ ನವೆಂಬರ್ 1 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಿದ್ದಾರೆ. 2024ರ ಜನೇವರಿ 20 ಅಥವಾ ಜನೇವರಿ 24 ರಂದು ಆ ಕೇಸನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆ ಎರಡು ತಿಂಗಳ ಈ ಅವಧಿಯಲ್ಲಿ ನಾವು ಶಿವರಾಜ ಪಾಟೀಲ ಜೊತೆಗೂ ಚರ್ಚೆ ಮಾಡುತ್ತೇವೆ. ಕನ್ನಡ ಪರ ಸಂಘಟನೆಗಳ ಬರಿ ಇರುವ ಮಾಹಿತಿ, ಸಲಹೆ ಮತ್ತು ಸೂಚನೆಗಳು ಗೊತ್ತಿದ್ದರೆ ಅವುಗಳನ್ನೂ ಆಲಿಸುತ್ತೇವೆ. ಮಾನ್ಯ ಮುಖ್ಯಮಂತ್ರಿಗಳ ಜೊತೆ ಗಡಿ ವಿಚಾರದ ಬಗ್ಗೆ ಮಾತನಾಡಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿಯೂ ಮಹಾರಾಷ್ಟ್ರ ಮಾದರಿಯಲ್ಲಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣವೆಂದರೆ ಕೇವಲ ಸರಕಾರ ಕೆಡುವುವುದು, ಸರಕಾರ ರಚಿಸುವುದು, ಸುಭದ್ರ ಸರಕಾರವನ್ನು ಪತನ ಮಾಡುವುದು, ಶಾಸಕರನ್ನು ಖರೀದಿ ಮಾಡುವುದು ರಾಜಕಾರಣವೇ? ಏನು ನಡೆಯುತ್ತಿದೆ? ಈ ರೀತಿ ಮಾಡುವುದು ಜನರಿಗೆ ಮಾಡುವ ಅವಮಾನವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾಡುವ ಮೋಸ. ಈ ರೀತಿ ಮೋಸ ಮಾಡುವುದನ್ನು ಜನರು ಸಹಿಸುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. 17 ಜನ ಶಾಸಕರನ್ನು ಬಿಜೆಪಿಯವರು ಖರೀದಿ ಮಾಡಿ ಸರಕಾರ ರಚನೆ ಮಾಡಿದ ಬಳಿಕ ದೇಶದಲ್ಲಿಯೇ ಬಿಜೆಪಿ ವರ್ಚಸ್ಸು ಕಡಿಮೆಯಾಗಿದೆ. ಇದೇ ವರ್ತನೆ ಮುಂದುವರೆದರೆ ನಾಶವಾಗಿ ಹೋಗುತ್ತೀರಿ ಎಂದು ಎಚ್. ಕೆ. ಪಾಟೀಲ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಎಂ. ಬಿ. ಪಾಟೀಲ, ಶಾಸಕರಾದ ಸಿ. ಎಸ್. ನಾಡಗೌಡ, ವಿಠ್ಠಲ ಧೋಂಡಿಬಾ ಕಟಕದೊಂಡ ಮುಂತಾದವರು ಉಪಸ್ಥಿತರಿದ್ದರು.