ಸಿಎಂ ರನ್ನು ಕೆಳಗಿಳಿಸುವ ಹುನ್ನಾರ ನಡೆದಿದೆ- ಸರಕಾರ ತನ್ನ ತಪ್ಪಿನಿಂದ ಪತನವಾಗಲಿದೆ- ಶಾಸಕ ಯತ್ನಾಳ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆದಿದೆ.  ಸಿಎಂ ರನ್ನು ಕೆಳಗಿಳಿಸಲು ದೆಹಲಿಯಲ್ಲಿ ಯಾರಾರನ್ನು ಭೇಟಿ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ ಹೆಸರು ಹೇಳದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಕೆಳಗಿಳಿಸಲು ದೆಹಲಿಯಲ್ಲಿ ಎಲ್ಲಿಲ್ಲಿ ಓಡಾಡುತ್ತಿದ್ದಾರೆ ಎನ್ನುವ ಮಾಹಿತಿ ನಮಗೂ ಇದೆ ಎಂದು ಹೇಳಿದರು.

ಚೆನ್ನಗಿರಿ ಶಾಸಕ ಡಿ. ಕೆ. ಶಿವಕುಮಾರ ಪರ 70 ಜನ ಶಾಸಕರಿದ್ದಾರೆ ಎಂದು ಹೇಳುತ್ತಿದ್ದಾರೆ.  ಈಗ ಸಿದ್ದರಾಮಯ್ಯ ಪರ 65 ಶಾಸಕರು ಇದ್ದಾರೆ ಎನ್ನುವಂತಾಗಿದೆ.  ಅದಕ್ಕೆ ಅವರೇ ಲೆಕ್ಕಾಚಾರ ಹಾಕುತ್ತಿದ್ದಾರೆ.  ಇತ್ತ ಸಚಿವ ಜಮೀರ್ ಅಹಮದ್ ಸಿದ್ದರಾಮಯ್ಯ ಐದು ವರ್ಷ ಸಿಎಂ ಇರ್ತಾರೆ ಎಂದು ಹೇಳಿದ್ದಾರೆ.  ಎಂ. ಬಿ. ಪಾಟೀಲ, ರಾಜಣ್ಣ, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಹೇಳಿದ್ದಾರೆ.  ಈ ಮದ್ಯೆ ಸರಕಾರ ವಿಫವಾಗಿದೆ.  ಹುಲಿ ಉಗುರಿನ ನೆನಪಿನಲ್ಲಿ ಮಾಧ್ಯಮಗಳು ರಾಜ್ಯದ ರಾಜಕೀಯ ಮರೆತಿದ್ದಾರೆ.  ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿ ದಿವಾಳಿ ಆಗಿದೆ.  ದುಡ್ಡು ಕೊಡಲು ಸರಕಾರದಲ್ಲಿ ಹಣ ಇಲ್ಲ.  ಯುವನಿಧಿ ಯೋಜನೆ ಇನ್ನೂ ಜಾರಿ ಮಾಡಿಲ್ಲ. ಇದೆಲ್ಲಾ ದಿವಾಳಿಯಾಗಿರುವ ಸಂಕೇತ ಎಂದು ಶಾಸಕರು ವಾಗ್ದಾಳಿ ನಡೆಸಿದರು.

ಸರಕಾರ ದಿವಾಳಿಯಾಗಿದೆ.  ಯಾವುದೇ ಯೋಜನೆಗಳು ಬಗ್ಗೆ ಅವರು ಹೇಳಿದರೋ ಅವು ಭಾಷಣಕ್ಕೆ ಸೀಮಿತವಾಗಿವೆ.    ಮಹಿಳೆಯರಿಗೆ ನೀಡಲಾಗಿದ್ದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ.  ಬದಲಾಗಿ ಹುಲಿ ಉಗುರು ಚಿರತೆ ಬಸವನಾಡು ಹೆಸರಿಡುವ ವಿಚಾರವನ್ನು ಮುನ್ನಲೆಗೆ ಬಿಟ್ಟು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದಂತೆ ಕಾಂಗ್ರೆಸ್ ಸರಕಾರ ಬೀಳುತ್ತದೆ ಎಂಬ ಭಯ ಡಿಕೆ ಶಿವಕುಮಾರಗೆ ಬಂದಿದೆ.  ಒಳಗಡೆ ಏನೋ ನಡೆದಿದೆ.  ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಅಸಮಾಧಾನಿವಿದೆ.  ಅದು ರಮೇಶ ಜಾರಕಿಹೊಳಿ ಅವರಿಗೆ ಗೊತ್ತಾಗುತ್ತದೆ.  ಎಲ್ಲೋ ಭೂಕಂಪವಾಗುವುದು ಬೆಳಗಾವಿಯವರಿಗೆ ಗೊತ್ತಾಗುತ್ತದೆ ಎಂದು ಯತ್ನಾಳ ಹಾಸ್ಯ ಭರಿತವಾಗಿ ಹೇಳಿದರು.

ಕಾಂಗ್ರೆಸ್ ಶಾಸಕರಿಗೆ ರೂ. 50 ಕೋಟಿ ಆಮೀಷವೊಡ್ಡಿ ಆಪರೇಷನ್ ಕಮಲ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.  ಈ ಆರೋಫದ ಕುರಿತು ವಿಡಿಯೋ ಆಡಿಯೋ ಇದೆ ಅಂತಾರೆ.  ಏನೇ ಆರೋಪವಿದ್ದರೂ ಅದನ್ನು ಬಹಿರಂಗಪಡಿಸಲಿ.  ಸುಮ್ಮನೇ ಬ್ಲ್ಯಾಕ್ ಮೇಲ್ ಮಾಡಬ್ಯಾಡ್ರಿ ಎಂದು ಕಿಡಿ ಕಾರಿದರು.

ನಕಲಿ ವಿಡಿಯೋ ಸೃಷ್ಟಿಕರ್ತರೇ ಕಾಂಗ್ರೆಸ್ಸಿನ ಮಹಾನಾಯಕರಿದ್ದಾರೆ.  ನಕಲಿ ಸಿಡಿ ಮಾಡುವ ಕಂಪನಿ ಕರ್ನಾಟಕ ಸರಕಾರದಲ್ಲಿದೆ.  ಓರ್ವ ಮಂತ್ರಿ ಆಪ್ತ ಬಾಂಗ್ಲಾದೇಶ ಮತ್ತು ಪಾಕಿಸ್ತಾನದವರನ್ನು ಕರ್ನಾಟಕದ ಮತದಾರರನ್ನಾಗಿ ಮಾಡುವ ದೊಡ್ಡ ಷಡ್ಯಂತ್ರ ಮಾಡಿದ್ದಾರೆ.  ರಮೇಶ ಜಾರಕಿಹೊಳಿ ಹೇಳಿದಂತೆ ನಕಲಿ ಸಿಡಿ ವಿಡಿಯೋ ಆಡಿಯೋ ಮಾಡುವ ಶಕ್ತಿ ಕಾಂಗ್ರೆಸ್ಸಿನ ಬಂಡೆಗಲ್ಲಿಗಿದೆ.  ಸಿಡಿ ವಿಡಿಯೋ ಇದ್ದರೆ ಅದನ್ನು ಬಹಿರಂಗ ಪಡಿಸಲಿ.  ಈ ಕುರಿತು ತನಿಖೆ ನಡೆಸಲಿ.  ಕಾಂಗ್ರೆಸ್ಸಿನವರು ತಾವೇ ಜಗಳಾಡಿ ಹಾಳಾಗುವಾಗ ನಮ್ಮದೇನು ಕೆಲಸ ಇದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರ ಬಹಳ ದಿನ ಇರಲ್ಲ.  ಹಾಲಿ ಸರಕಾರದಲ್ಲಿ ಬಹಳ ಜನರು ಸಿಎಂ ಆಗಬೇಕೆನ್ನುತ್ತಾರೆ.  ಬಹಳ ಜನ ಡಿಸಿಎಂ ಆಗಬೇಕು ಎಂದುಕೊಂಡಿದ್ದಾರೆ.  ಎಂ. ಬಿ. ಪಾಟೀಲ, ಸತೀಶ ಜಾರಕಿಹೋಳಿ, ಪ್ರಿಯಾಂಕ ಖರ್ಗೆ, ಜಿ. ಪರಮೇಶ್ವರ ಸಿಎಂ ಆಗಬೇಕು ಎನ್ನುತ್ತಾರೆ.  ಆದರೆ, ಇರೋದು ಒಂದೇ ಮುಖ್ಯಮಂತ್ರಿ ಸ್ಥಾನ.  ಆ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ.  ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಒಂದು ಗುಂಪು ಹೇಳುತ್ತದೆ.  ಎರಡೂವರೆ ವರ್ಷಕ್ಕೆ ಬದಲಾವಣೆ ಆಗುತ್ತದೆ ಎಂದು ಮತ್ತೊಂದು ಗುಂಪು ಹೇಳುತ್ತದೆ.  ಇದನ್ನು ಅವರೇ ಹೇಳಿಕೊಳ್ಳುತ್ತಾರೆ.  ನಾವೇನು ಹೇಳಿಕೊಳ್ಳುತ್ತಿಲ್ಲ.  ಅವರಲ್ಲಿಯೇ ತಾಳಮೇಳಗಳು ಇಲ್ಲವೆಂದ ಮೇಲೆ ರಮೇಶ ಜಾರಕಿಹೊಳಿ ಹೇಳಿಕೆಗಳು ಸತ್ಯವಾಗುವ ಲಕ್ಷಣಗಳು ಕಾಣುತ್ತಿವೆ.  ಗ್ಯಾರಂಟಿ ಯೋಜನೆಗೆ ಹಣ ಕೊಡಲಾಗದೇ ಕಾಂಗ್ರೆಸ್ ಸರಕಾರ ಪತನವಾಗುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ ರಾಜ್ಯದ ಸರಕಾರಿ ಬಸ್ಸಿಗೆ ಮಹಾರಾಷ್ಟ್ರದಲ್ಲಿ ಬೆಂಕಿ ಹಚ್ಚಿದ ಪ್ರಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸುಗಳಿಗೆ ಬೆಂಕಿ ಹಚ್ಚಿರುವುದನ್ನು ಖಂಡಿಸಿದರು.

ಮರಾಠಿ ಮೀಸಲಾತಿಗಾಗಿ ಹೋರಾಟ ಮಾಡಲಿ.  ನೀವು ಹೋರಾಟ ಮಾಡಿ.  ಆದರೆ, ಕರ್ನಾಟಕದ ಬಸ್ ಏನು ಮಾಡಿತ್ತು.  ನಿಮ್ಮ ರಾಜ್ಯದಲ್ಲಿ ನೀವು ಹೋರಾಟ ಮಾಡಿ.  ನಮ್ಮ ರಾಜ್ಯದ ಬಸ್ಸುಗಳಿಗೆ ಬೆಂಕಿ ಹಚ್ಚುವುದು ಕನ್ನಡಿಗರನ್ನು ಕೆರಳಿಸುವಂಥದ್ದು.  ನಿಮ್ಮ ಹೋರಾಟ ನಿಮ್ಮ ರಾಜ್ಯದ ಸರಕಾರದ ವಿರುದ್ದ ಇರಲಿ.  ಅದು ಕರ್ನಾಟಕ ರಾಜ್ಯದ ಜನರಿಗೆ ಹೊರೆಯಾಗಬಾರದು.  ಸಾಕಷ್ಟು ಜನ ವೈದ್ಯಕೀಯ ಉಪಚಾರಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಾರೆ.  ಅಲ್ಲಿನ ತಮ್ಮ ಸಂಬಂಧಿಕರ ಬಳಿಗೆ ಹೋಗುತ್ತಾರೆ.  ಅವರಿಗೆ ತೊಂದರೆ ಮಾಡುವದು ಕರ್ನಾಟಕ ಪಾಸಿಂಗ್ ವಾಹನಗಳಿಗೆ, ಬಸ್ಸುಗಳಿಗೆ ತೊಂದರೆ ಮಾಡುವದನ್ನು ನಾನು ಖಂಡಿಸುವೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಾವು ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುಷ್ಟರಲ್ಲಿ ಸರಕಾರವೇ ಬದಲಾಗಿ ಹೋಗಬಹುದು ಎಂದು ಮಾರ್ಮಿಕವಾಗಿ ಹೇಳಿದ ಅವರು, ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ.  ಹೀಗಾಗಿ ನಮ್ಮ ಪಕ್ಷದಿಂದ ತಂಡಗಳನ್ನು ಮಾಡಿ ಬರದ ಆಧ್ಯಯನ ಮಾಡುತ್ತೇವೆ.  ಮೈಸೂರು ಭಾಗಕ್ಕೆ ನಾನು ಇದೇ ನವೆಂಬರ್ 6 ಮತ್ತು 7ರಂದು ನಾನು ತೆರಳುತ್ತೇನೆ.  ರಾಜ್ಯದಲ್ಲಿ ಬೀಕರ ಬರಗಾಲ ಬಂದಿದೆ.  ಯಾವ ಗಳಿಗೆಯಲ್ಲಿ ಈ ಸರಕಾರ ಬಂತೋ? ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ.  ರೈತರ ಬೆಳೆಗಳಿಗೆ ಪರಿಹಾರ ಸಿಗುತ್ತಿಲ್ಲ.  ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರು ಪೂರೈಸುತ್ತಿಲ್ಲ.  ಈ ಹಿನ್ನೆಲೆಯಲ್ಲಿ ನಾವು ಬರಗಾಲ ಆಧ್ಯಯನ ಮಾಡಿ ಮುಂದಿನ ಆಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಅವರು ತಿಳಿಸಿದರು.

ದೀಪಾವಳಿ ಹಬ್ಬದ ನಿಮಿತ್ಯ ನಗರ ಕ್ಷೇತ್ರದಲ್ಲಿ 11ಸಾವಿರ ಜನ ಬಡವರಿಗೆ ಫುಡ್ ಕಿಟ್ ಕೊಡುತ್ತೇನೆ.  ಬಡ ಹಿಂದೂಗಳು ಹಬ್ಬ ಮಾಡಬಾರದಾ? ಬಡ ಜನರೂ ಖುಷಿಯಿಂದ ಹಬ್ಬ ಮಾಡಲಿ.  ಇದರಿಂದ ಯಾರಿಗೂ ತೊಂದರೆಯಾಗಲ್ಲ.  ತೊಂದರೆಯಾದರೆ ನಾವು ಜವಾಬ್ದಾರರಲ್ಲ ಎನ್ನುವ ಮೂಲಕ ಅವರು ತಮ್ಮ ರಾಜಕೀಯ ವೈರಿಗಳಿಗೆ ಟಾಂಗ್ ನೀಡಿದರು.  ಅಲ್ಲದೇ, ಈ ಫುಡ್ ಕಿಟ್ ನೀಡುವುದರ ಹಿಂದೆ ಬಹಳ ದಾನಿಗಳು ಇದ್ಧಾರೆ ಎಂದು ಸ್ಪಷ್ಟಪಡಿಸಿದರು.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮುಂದೂಡಿಕೆ ಕುರಿಕು ಪ್ರತಿಕ್ರಿಯ ನೀಡಿದ ಅವರು, ಚುನಾವಣೆ ಮುಂದೂಡಿದವರು ಯಾರು? ಎಂದು ಪ್ರಶ್ನಿಸಿದರು.  ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸೋಲುವ ಭಯದಿಂದ ಸರಕಾರ ಗಾಬರಿಯಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಹಾಕಿದೆ.  ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಕಾರಣದಿಂದ ಚುನಾವಣೆ ಮುಂದೂಡಿಸಿದ್ದಾರೆ.  ಅಕ್ಟೋಬರ್ 30 ಕ್ಕೆ ನೋಡುತ್ತೇನೆ ಎಂದು ನಮಗೆ ಚಾಲೆಂಜ್ ಮಾಡಿದ್ದರು.  ಆದರೆ, ಅದು ಆಗಲಿಲ್ಲ ಎಂದು ಹೇಳಿದರು.

ಬಿಜೆಪಿಯವರು ಕೆಲ ಸದಸ್ಯರನ್ನು ಅಪಹರಣ ಮಾಡಿದ್ದಾರೆಂಬ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೆಲ ಸದಸ್ಯರನ್ನು ಅಪಹರಣ ಮಾಡಿದ್ದೇವೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಪೊಲೀಸರು ತನಿಖೆ ಮಾಡಲಿ.  ಎಲ್ಲಾ ಆಧಿಕಾರಿಗಳು ಅವರ ಕೈಯ್ಯಲ್ಲಿದ್ದಾರೆ.  ನಾವು ಕಿಡ್ಯಾಪ್ ಮಾಡಿದ್ದರೂ ಆ್ಯಕ್ಷನ್ ತಗೊಳ್ಳೋದು ಸಹ ಅವರ ಕೈಯ್ಯಲ್ಲಿದೆ.  ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.

Leave a Reply

ಹೊಸ ಪೋಸ್ಟ್‌