ವಿಜಯಪುರ: ಜಿಲ್ಲೆಯಲ್ಲಿ ಉಂಟಾಗಿರುವ ಬರ ಅಧ್ಯಯನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ನೇತೃತ್ವದ ತಂಡ ನ. 4ರಂದು ಭೇಟಿ ನೀಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಂಡದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಪಿ. ರಾಜೀವ, ವೀರಣ್ಣ ಚರಂತಿಮಠ, ಎ. ಎಸ್. ಪಾಟೀಲ ನಡಹಳ್ಳಿ, ಸಿದ್ದು ಸವದಿ ಇರಲಿದ್ದಾರೆ ಎಂದು ತಿಳಿಸಿದರು.
ಈ ತಂಡವು ನ. 4 ರಂದು ಬೆ. 9 ರಿಂದ ಮ. 3ರ ವರೆಗೆ ಜಿಲ್ಲೆಯ ತಿಕೋಟಾ, ನಾಗಠಾಣ ಹಾಗೂ ಕೊಲ್ಹಾರ ತಾಲೂಕುಗಳಿಗೆ ಭೇಟಿ ನೀಡಿ, ರೈತರ ಸಂಕಷ್ಟವನ್ನು ಆಲಿಸಲಿದೆ. ರಾಜ್ಯದಲ್ಲಿ ಭೀಕರ ಬರದಿಂದಾಗಿ ರೈತು ಕುಗ್ಗಿ ಹೋಗಿದ್ದಾರೆ. ಅನ್ನದಾತರ ಸಮಸ್ಯೆಯನ್ನು ಕೇಳಲು ನಳಿನಕುಮಾರ್ ಕಟೀಲ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಾಸಕರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ, ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಬರ ಅಧ್ಯಯನ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಪರಿಸ್ಥಿತಿ ಅಧ್ಯಯನ ನಡೆಸಲಿದ್ದಾರೆ. ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯಾದ್ಯಂತ ಭೀಕರ ಬರ ಪರಿಸ್ಥಿತಿ ದುರಾಗಿದ್ದರೂ ರಾಜ್ಯ ಸರಕಾರ ಪರಿಹಾರ ಕಾಮಗಾರಿಗಳ:್ನು ಕೈಗೊಳ್ಳದೇ ಕಣ್ಣುಮುಚ್ಚಿ ಕುಳಿತಿದೆ. ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿವೃಷ್ಟಿ ಉಂಟಾಗಿತ್ತು. ಅಂದು ಯಡಿಯೂರಪ್ಪ ಎನ್ ಡಿ ಆರ್ ಎಫ್ ಮಾರ್ಗಸೂಚಿ ಬದಿಗೊತ್ತಿ ಎರಡು ಪಟ್ಟು ಪರಿಹಾರ ನೀಡುವ ಮೂಲಕ ಸ್ಪಂದಿಸಿದ್ದರು. ಈ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸಂಜಯ ಐಹೊಳೆ, ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಸಂಜಯ ಪಾಟೀಲ ಕನಮಡಿ, ವಿಜಯ ಜೋಶಿ ಉಪಸ್ಥಿತರಿದ್ದರು.