ಜೈಲಿನ ಕೈದಿಗಳಿಗೆ ಉನ್ನತ ಶಿಕ್ಷಣ- ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್ಗಳ ಅಧ್ಯಯನ ಕೇಂದ್ರ ಉದ್ಘಾಟನೆ

ವಿಜಯಪುರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಕೇಂದ್ರ ಕಾರಾಗೃಹದಲ್ಲಿ ಮೈಸೂರು ಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಬಂಧಿಗಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್‍ಗಳ ಅಧ್ಯಯನ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಕೇಂದ್ರದ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಕಾರಾಗೃಹದ ಬಂಧಿಗಳು ಬಿಡುಗಡೆಯ ನಂತರದ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಲು ಉನ್ನತ ಶಿಕ್ಷಣ ಕೇಂದ್ರಗಳು ಅತೀ ಅಗತ್ಯವಾಗಿವೆ.  ಬಂದಿಗಳ ಭವಿಷ್ಯದ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಆಯೋಜಿಸಲು ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು.  ಕನ್ನಡ ಭಾಷೆ, ನೆಲ, ಜಲದ ಕುರಿತಾದ ಗ್ರಂಥಗಳನ್ನು ಕಾರಾಗೃಹದ ಗ್ರಂಥಾಲಯಕ್ಕೆ ಒದಗಿಸುವುದಾಗಿ ಹೇಳಿದರು.

ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಬಂಧಿಗಳಿಗೆ ಉನ್ನತ ಶಿಕ್ಷಣ, ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್‍ಗಳ ಅಧ್ಯಯನ ಕೇಂದ್ರ ಉದ್ಘಾಟಿಸಿ ಟಿ. ಭೂಬಾಲನ್ ಮಾತನಾಡಿದರು

ಎಸ್ಪಿ ಋಷಿಕೇಶ ಸೋನಾವಣೆ ಮಾತನಾಡಿ, ಕಾರಾಗೃಹದ ಕೈದಿಗಳಿಗೆ ಇದೊಂದು ಸದಾವಕಾಶ ದೊರೆತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರಾಗೃಹದ ಅಧೀಕ್ಷಕ ಡಾ. ಐ. ಜೆ. ಮ್ಯಾಗೇರಿ ಮಾತನಾಡಿ, ಹೆತ್ತತಾಯಿ ಹೊತ್ತ ನಾಡು ಸ್ವರ್ಗ ಸಮಾನ.  ಒಳ್ಳೆಯ ಮನುಷ್ಯರಾಗಿ ಬದುಕುವ ಅವಕಾಶ ಪಡೆಯಿರಿ.  ಶ್ರೇಷ್ಠನಾಗಲು ಸಾಕಷ್ಟು ಸಮಯ ಮತ್ತು ಸಹನೆ ಬೇಕು.  ಕನಿಷ್ಠನಾಗಲು ಸ್ವಲ್ಪ ಸಮಯ ಸಾಕು.  ಸಕಲ ಮೂಲ ಸೌಕರ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರಾಗೃಹದ ಸಹಾಯಕ ಆಡಳಿತಾಧಿಕಾರಿ ರವಿ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕ ಅರುಣ ಕೆ. ಎಸ್. ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಡಾ. ಅನಿಲ ಕೊರಬು, ಶಕೀನಾಬೇಗಂ ನದಾಫ, ಸಂತೋಷ ಸಂತಾಗೋಳ ಸೇರಿದಂತೆ ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌