ವಿಜಯಪುರ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮತದಾರರ ಪಟ್ಟಿಯ ವೀಕ್ಷಕರಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಅವರು ಇಂಡಿ ವಿಧಾನಸಭಾ ಮತಕ್ಷೇತ್ರದ ನಾನಾ ಮತಗಟ್ಟೆಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂಡಿ ತಾಲೂಕಿನ ಹೊರ್ತಿ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿದ ಅವರು, ಮಕ್ಕಳ ಹಾಜರಾತಿ ಮತ್ತು ನಿರ್ಮಾಣ ಹಂತದ ಕಟ್ಟಡ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ನಂತರ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಇಂಡಿ ವಿಧಾನಸಭೆ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 178 ರಿಂದ 184 ರವರೆಗೆ ಮತಗಟ್ಟೆಗಳಿಗೆ ಭೇಟಿ ನೀಡಿದ ಅವರು, ಮತಗಟ್ಟೆಗಳಲ್ಲಿರುವ ಮೂಲಸೌಲಭ್ಯಗಳ ಕುರಿತು ಪರಿಶೀಲನೆ, ಬಿಎಲ್‍ಓಗಳಿಗೆ ವಿಶೇಷ ಅಭಿಯಾನ ಬಗ್ಗೆ ತಿಳುವಳಿಕೆ ಮೂಡಿಸಿ, ಬಿಎಲ್‍ಓ ತಂತ್ರಾಂಶ ಪ್ರಗತಿ ಪರಿಶೀಲನೆ ನಡೆಸಿ, ನಮೂನೆ 6,7 ಹಾಗೂ 8ರ ಕುರಿತು ಮಾಹಿತಿ ಪಡೆದುಕೊಂಡರು.
ಹೊರ್ತಿ ಗ್ರಾಮದ ಅಂಗನವಾಡಿ, ಗ್ರಾಮ ಪಂಚಾಯಿತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ರೋಗಿಗಳಿಗೆ ನೀಡುತ್ತಿರುವ ವೈದ್ಯೋಪಚಾರ ಕುರಿತು ಮಾಹಿತಿ ಪಡೆದುಕೊಂಡು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವೈದ್ಯೋಪಚಾರ ನಡೆಸಬೇಕು. ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ ಅವರು, ಹಳಗುಣಕಿಯ ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಸೌಕರ್ಯಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ವಸತಿ ಶಾಲೆಯಲ್ಲಿರುವ ಪ್ರಯೋಗಾಲ ವೀಕ್ಷಣೆ ನಡೆಸಿದ ಅವರು, ವಸತಿ ಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲೆಯ ಆವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡ-ಮರಗಳನ್ನು ಬೆಳೆಸುವ ಮೂಲಕ ಉತ್ತಮ ವಾತಾವರಣ ನಿರ್ಮಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಪ್ರೇರೆಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಡಿ ತಹಸೀಲ್ದಾರ ವಿಜಯಕುಮಾರ ಕಡಕಬಾವಿ, ತಾಲೂಕ ಸಮಾಜ ಕಲ್ಯಾಣಾಧಿಕಾರಿ ಬಿ. ಜೆ. ಇಂಡಿ, ಚಡಚಣ ಕ್ಷೇತ್ರ ಶಿಕ್ಷಾಣಾಧಿಕಾರಿ ನಾಯಕ, ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಎಸ್. ಆಲಗೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಗಿಮಠ, ಜಿಲ್ಲಾ ಪಂಚಾಯಿತಿ ಯೋಜನಾ ವಿಭಾಗದ ಅಧಿಕಾರಿ ಎ. ಬಿ. ಅಲ್ಲಾಪೂರ ಸೇರಿದಂತೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.