ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಎರಡು ಬಾರಿ ಸಿಎಂ ಆದರೂ ಅವರಿಗೆ ಆಡಳಿತ ನಡೆಸಲು ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳೀನ ಕುಮಾರ ಕಟೀಲ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಬರ ಅಧ್ಯಯನ ತಂಡದೊಂದಿಗೆ ತಿಕೋಟಾ ತಾಲೂಕಿನ ಬರಪೀಡಿದ ಜಾಲಗೇರಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಬರದಿಂದ ಉಂಟಾಗಿರುವ ಬೆಳೆಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬರದ ವಿಚಾರದಲ್ಲಿ ರಾಜ್ಯದ ಸಂಸದರು ಪ್ರಧಾನಿಗಳ ಭೇಟಿಗೆ ಸಮಯ ನಿಗಧಿ ಮಾಡಿಸಲಿ ಎಂದ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕಟೀಲ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ. ಎರಡು ಬಾರಿ ಮುಖ್ಯಮಂತ್ರಿ, ಹಣಕಾಸು ಸಚಿವರಾದರೂ ಆಡಳಿತ ನಡೆಸಲು ಬರುವುದಿಲ್ಲ. ಎನ್. ಡಿ. ಆರ್. ಎಫ್ ನಲ್ಲಿ ಹಣ ಬಿಡುಗಡೆಗೆ ಅದರದೇ ಆದ ಮಾರ್ಗಸೂಚಿ ಇವೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ನೆರೆ ಬಂದಿತ್ತು. ಆಗ ಅವರು ಕೇಂದ್ರದಿಂದ ಹಣಕಾಸು ನೆರವಿಗೆ ಕಾಯಲಿಲ್ಲ. ಸಂತ್ರಸ್ತರ ಬಳಿಗೆ ಹೋಗಿ ರೂ. 5 ಲಕ್ಷ ಪರಿಹಾರ ಕೊಟ್ಟರು. ಈಗ ಬರ ವಿಚಾರದಲ್ಲಿಯೂ ಅಷ್ಟೇ. ಕೇಂದ್ರದಿಂದ ಹಣ ಬಂದೆ ಬರುತ್ತದೆ. ಮಾರ್ಗಸೂಚಿ ಪ್ರಕಾರ ಅನುದಾನ ಬರಲಿದೆ. ಸಧ್ಯ ತಕ್ಷಣ ಪರಿಹಾರ ಕೊಡಬೇಕಾಗಿರುವುದು ಸಿದ್ದರಾಮಣ್ಣನ ಜವಾಬ್ದಾರಿ. ಜಿಲ್ಲಾಧಿಕಾರಿಗಳ ಬಳಿ ಇರುವ ಎನ್. ಡಿ. ಆರ್. ಎಫ್. ಹಣವನ್ನೇ ಬಿಡುಗಡೆ ಮಾಡಿದರೂ ಸಾಕಾಗುತ್ತದೆ. ಬರ ವಿಚಾರದಲ್ಲಿ ಸಿಎಂ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಬ್ರೇಕ್ ಪಾಸ್ಟ್ ಮೀಟಿಂಗ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಲ್ಕು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ ಕೇವಲ ಐದು ತಿಂಗಳಲ್ಲಿ 250 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರದಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಆತ್ಮಹತ್ಯೆ ಸರಣಿಯಲ್ಲಿ ನಡೆಯುತ್ತಿವೆ. ಬರದಿಂದ ರೈತರು ಕಂಗೆಟ್ಟಿದ್ದಾರೆ. ಸಿಎಂಗೆ ಈ ಬಗ್ಗೆ ಯೋಚನೆ ಇಲ್ಲ. ಈ ಕುರಿತು ಸಿಎಂ ತಲೆಕೆಡಿಕೊಂಡಿಲ್ಲ. ಬ್ರೇಕ್ ಫಾಸ್ಟ್, ಬೇರೆ ಫಾಸ್ಟ್, ಎಲ್ಲಾ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ರೈತರ ರಕ್ಷಣೆ ಮಾಡಿದ್ರೆ ಸಿಎಂ ಸೀಟ್ ಉಳಿಯುತ್ತದೆ. ರೈತರ ಕಡೆಗಣಿಸಿದರೆ ಇವರ ಸೀಟ್ ಉಳಿಯುವುದಿಲ್ಲ. ಬರದ ನಡುವೆ ಅವರಿಗೆ ರಾಜ್ಯದ ರೈತರ ಹಿತರಕ್ಷಣೆ ಮುಖ್ಯವಲ್ಲ. ಖುರ್ಚಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಖುರ್ಚಿ ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ರೈತರ ರಕ್ಷಣೆ ಹೇಗೆ ಮಾಡುವುದು ಎನ್ನುವ ಯೋಚನೆಯಲ್ಲಿ ಕಾಂಗ್ರೆಸ್ ಮತ್ತು ಸಿಎಂ ಇಲ್ಲ ಎಂದು ನಳೀನಕುಮಾರ ಕಟೀಲ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.