ವಿಜಯಪುರ: ಬಿಜೆಪಿ ರಾಜ್ಯಾದ್ಯಕ್ಷ ನಳೀನ ಕುಮಾರ ಕಟೀಲ ಬರ ಅಧ್ಯಯನ ನಡೆಸುವ ಬದಲು ತಮ್ಮ ಪಕ್ಷದಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆಗೆ ಅಧ್ಯಯನ ನಡೆಸಲಿ ಎಂದು ಎಂ. ಎಲ್. ಸಿ. ಸುನೀಲಗೌಡ ಪಾಟೀಲ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬರ ಅಧ್ಯಯನಕ್ಕೆ ತಿಕೋಟಾ ತಾಲೂಕಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೇತೃತ್ವದ ತಂಡ ಜಿಲ್ಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಯೋಜನೆಗಳನ್ನು ನೋಡಿ ಖುಷಿಪಟ್ಟಿದೆ ಎಂದು ತಿಳಿಸಿದ್ದಾರೆ.
ಎಂ. ಬಿ. ಪಾಟೀಲ ಪ್ರಯತ್ನದಿಂದ ತಿಕೋಟಾ ಬರಪೀಡಿತ ತಾಲೂಕು ಎಂದು ಘೋಷಣೆ
ಸಚಿವ ಎಂ. ಬಿ. ಪಾಟೀಲ ಅವರ ಸತತ ಪ್ರಯತ್ನದಿಂದಾಗಿ ತಿಕೋಟಾ ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಆದರೆ, ತಮ್ಮ ಪಕ್ಷದಲ್ಲಿನ ಭಿನ್ನಮತವನ್ನು ಮರೆಮಾಚಲು ಕಟೀಲ ಅವರು ತಂಡ ಕಟ್ಟಿಕೊಂಡು ಬರ ಅಧ್ಯಯನ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ,
ಕೇಂದ್ರದ ಅವೈಜ್ಞಾನಿಕ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ತಿಕೋಟಾ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಕೇವಲ ಒಂದು ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವುದನ್ನು ಪರಿಗಣಿಸಿ ಪಟ್ಟಿಯಿಂದ ಕೈಬಿಡಲಾಗಿತ್ತು. ಆದರೆ, ಈ ಕುರಿತು ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದ ಎಂ. ಬಿ. ಪಾಟೀಲ ಅವರು, ಬರ ಘೋಷಣಗೆ ಮಾರ್ಗಸೂಚಿಯಂತೆ ಅಗತ್ಯವಾಗಿರುವ ಎಲ್ಲ ದಾಖಲೆಗಳನ್ನು ಒದಗಿಸುವ ಮೂಲಕ ತಿಕೋಟಾ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಕಾರಣರಾಗಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಅನ್ನದಾತರಲ್ಲಿ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಆದರೆ, ಬಿಜೆಪಿಯಲ್ಲಿರುವ ಆಂತರಿಕ ಮತ್ತು ಬಹಿರಂಗ ಭಿನ್ನಮತವನ್ನು ನಿರ್ವಹಣೆ ಮಾಡಲು ಸಾಧ್ಯವಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ, ಪಕ್ಷದ ಉಸಾಬರಿಯೇ ಬೇಡ ಎಂಬ ಧೋರಣೆಯಿಂದ ತಂಡ ಕಟ್ಟಿಕೊಂಡು ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಅವರು ಬರ ಅಧ್ಯಯನ ನಡೆಸುವ ಬದಲು ತಮ್ಮ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತದ ಕುರಿತು ಗಮನ ಹರಿಸಲಿ. ಅಲ್ಲದೇ, ಚುನಾವಣೆ ಮುಗಿದು ಐದಾರು ತಿಂಗಳಾಗುತ್ತ ಬಂದರೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿಗೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ಅಲ್ಲದೇ, ವಿಧಾನ ಮಂಡಲದಲ್ಲಿ ಪ್ರತಿಪಕ್ಷದ ನಾಯಕ ಇಲ್ಲದ ಕಾರಣ ಅವರದೇ ಪಕ್ಷದ ಶಾಸಕರು ಅಧಿವೇಶನಕ್ಕೆ ಹೋಗುವುದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷದ ನಾಯಕರನ್ನು ಯಾಕೆ ಆಯ್ಕೆ ಮಾಡುತ್ತಿಲ್ಲ? ಇದಕ್ಕೆ ಏನು ಕಾರಣ ಎಂಬುದರ ಕುರಿತು ಅಧ್ಯಯನ ನಡೆಸಲು ನಳೀನ ಕುಮಾರ ಕಟೀಲ ಅವರು ಮೊದಲು ತಂಡ ರಚಿಸಲಿ. ಅದನ್ನು ಬಿಟ್ಟು ಬರ ಅಧ್ಯಯನ ನೆಪದಲ್ಲಿ ತಿರುಗಾಡುವುದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದೆ ಎಂದು ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಎಂ. ಬಿ. ಪಾಟೀಲ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ರೂಪಿಸಿರುವ ನೀರಾವರಿ ಯೋಜನೆಗಳು ಮತ್ತು ಈಗ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೈಗೊಂಡಿರುವ ಮುಂಜಾಗೃತೆ ಕ್ರಮಗಳಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಬರ ಪರಿಣಾಮ ಬೀರಿಲ್ಲ. ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿಸಿರುವ ಕಾರಣ ಕೆರೆಗಳಿಗೂ ನೀರು ಬಂದಿದೆ. ಅಲ್ಲದೇ, ಪ್ರತಿನಿತ್ಯ ಸಮರ್ಪಕ ನೀರು ಪೂರೈಕೆ ಮತ್ತು ವಿದ್ಯುತ್ ಸರಬರಾಜು ಆಗುವಂತೆ ನಿಗಾ ವಹಿಸಿದ್ದಾರೆ. ಇದರಿಂದ ರೈತರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ತಿಕೋಟಾ ತಾಲೂಕನ್ನು ಮೂರ್ನಾಲ್ಕು ದಿನಗಳಲ್ಲಿ ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಸಚಿವರು ನವೆಂಬರ್ 1 ರಂದೇ ಸ್ಪಷ್ಟಪಡಿಸಿದ್ದರು. ಅದರಂತೆ ಈಗ ನವೆಂಬರ್ 4 ರಂದು ಈ ಘೋಷಣೆ ಮಾಡಲಾಗಿದೆ. ಇದರ ಅರಿವಿದ್ದರೂ ಬಿಜೆಪಿಯವರು ಪ್ರಚಾರದ ಹುಚ್ಚಿನಿಂದ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೇ, ನಳೀನ ಕುಮಾರ ಕಟೀಲ ಮತ್ತು ಉಳಿದ ಬಿಜೆಪಿ ಮುಖಂಡರ ತಂಡ ಅರಕೇರಿ ಏತನೀರಾವರಿ ಯೋಜನೆಯ ಅರಕೇರಿ ಗುಡ್ಡದ ಬಳಿ ಡೆಲಿವರಿ ಚೇಂಬರ್ ಗೆ ಭೇಟಿ ನೀಡಿ ಅಲ್ಲಿ ಉಕ್ಕಿ ಹರಿಯುತ್ತಿದ್ದ ನೀರನ್ನು ಕಣ್ತುಂಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಖುಷಿಯಿಂದ ಕೆಕೆ ಹಾಕಿದ್ದಾರೆ. ಅಕ್ಟೋಬರ್ 27 ರಿಂದ ಈ ಡೆಲಿವರಿ ಚೇಂಬರ್ ಮೂಲಕ ನಾನಾ ಕೆರೆಗಳು ಮತ್ತು ಗ್ರಾಮಗಳಿಗೆ ಪಾಳಿ(ಸರದಿ) ಪ್ರಕಾರ ನೀರು ಹರಿಸಲಾಗುತ್ತಿದೆ. ಇದನ್ನು ಕಣ್ಣಾರೆ ಕಂಡ ನಳೀನ ಕುಮಾರ ಕಟೀಲ ಮತ್ತು ಉಳಿದ ನಾಯಕರು ಎಂ. ಬಿ. ಪಾಟೀಲ ಅವರ ಜನಪರ ಕಾರ್ಯಗಳನ್ನೂ ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈತರು ಎಂ. ಬಿ. ಪಾಟೀಲರ ಪುಣ್ಯದಿಂದಾಗಿ ಬೇಸಿಗೆಯಲ್ಲಿಯೂ ನಮಗೆ ನೀರು ಸಿಗುತ್ತಿದೆ ಎಂದು ಬಿಜೆಪಿಯ ತಂಡದ ಎಲ್ಲ ಸದಸ್ಯರಿಗೆ ವಿವರಿಸಿದ್ದಾರೆ.
ಬರದ ಬವಣೆಯಲ್ಲಿಯೂ ಎಂ. ಬಿ. ಪಾಟೀಲರು ಕಾಲುವೆಗಳಿಗೆ ನೀರು ಹರಿಸುವ ಮೂಲಕ ಅನ್ನದಾತರಿಗೆ ಆಪದ್ಬಾಂಧವರವಾಗಿದ್ದಾರೆ. ಅಲ್ಲದೇ, ಮುಂಬರುವ ದಿನಗಳಲ್ಲಿಯೂ ಜಿಲ್ಲೆಯ ಸಮಗ್ರ ರೈತಾಪಿ ವರ್ಗದ ಪರ ಕೆಲಸ ಮಾಡಲಿದ್ದಾರೆ. ಈಗ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿರುವುದರಿಂದ ಸರಕಾರದ ಮಾರ್ಗಸೂಚಿಯಂತೆ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಸುನೀಲಗೌಡ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.