ವಿಜಯಪುರ: ಚಡಚಣ ಪಿಎಸ್ಐ ಮಹಾದೇವ ಯಲಿಗಾರ ಅವರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ವಿಕಾಶ್ ಕುಮಾರ್ ವಿಕಾಶ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಅನುಪಮ ಅಗರವಾಲ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಇದೇ ಚಡಚಣದಲ್ಲಿ ಪಿಎಸ್‌ಐ ಆಗಿದ್ದ ಮಹಾದೇವ ಯಲಿಗಾರ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಸೇರಿದಂತೆ ನಾನಾ ಕರ್ತವ್ಯಲೋಪ ಆರೋಪದಡಿ ಅಮಾನತು ಆಗಿದ್ದರು. ಆದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇದೇ ಚಡಚಣ ಪೊಲೀಸ್ ಠಾಣೆಗೆ ಮತ್ತೆ ಪಿಎಸ್‌ಐ ಆಗಿ ವರ್ಗಾವಣೆಯಾಗಿ ಬಂದಿದ್ದ ಮಹಾದೇವ ಯಲಿಗಾರ ಅವರನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ಕರೆತಂದು ಕುಂಬಳಕಾಯಿಯಿಂದ ದೃಷ್ಠಿ ತೆಗೆದು ಭರ್ಜರಿಯಾಗಿ ಸ್ವಾಗತಿಸಿದ್ದರು. ಈಗ ಮಹಾದೇವ ಯಲಿಗಾರ ಅವರು ಮತ್ತೆ ಅಮಾನತಾಗಿದ್ದಾರೆ.
ಅಮಾನತಿಗೆ ಪ್ರಮುಖ ಕಾರಣ
ಚಡಚಣ ಪಿಎಸ್ಐ ಮಹಾದೇವ ಯಲಿಗಾರ ಅವರು 03.08.2023 ರಿಂದ 25.08.2023ರ ಅವಧಿಯಲ್ಲಿ ಚಡಚಣ ಪ್ರಭಾರ ಸಿಪಿಐ ಆಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೊರೆತ ಶವವೊಂದರ ಗುರುತು ಮತ್ತು ಸಾವಿನ ಕಾರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ಸಂಬಂಧ ಕೇವಲ ಮೊದಲ ಆರೋಪಿಯ ಹೇಳಿಕೆಯ ಆಧಾರದ ಮೇಲೆ ಪ್ರಕರಣವನ್ನು ಮಹಾರಾಷ್ಚ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಉಮದಿ ಪೊಲೀಸ್ ಠಾಣೆಗೆ ವರ್ಗಾವಣೆಗೆ ನಿರ್ಧರಿಸಿದ್ದರು. ಆದರೆ, ಕೃತ್ಯ ನಡೆದ ಸ್ಥಳದ ಬಗ್ಗೆ ಮತ್ತು ಉಳಿದ ಆರೋಪಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲ, ಕೃತ್ಯ ನಡೆದ ಸ್ಥಳದದಲ್ಲಿನ ಮಣ್ಣು ಮತ್ತೀತರ ವಸ್ತುಗಳನ್ನು ಜಪ್ತಿ ಮಾಡಿ ಎಫ್ಎಸ್‌ಎಲ್ ಪರೀಕ್ಷೆಗೂ ಕಳುಹಿಸಿರಲಿಲ್ಲ. ಈ ಪ್ರಕರಣದ ವರ್ಗಾವಣೆ ಕುರಿತು ವಿಜಯಪುರ ಜಿಲ್ಲೆಯ ಇಂಡಿ ಜೆಎಎಂಎಪ್‌ಸಿ ನ್ಯಾಯಾಲಯ ಮೊದಲ ಆರೋಪಿಯನ್ನು ಮಹಾರಾಷ್ಟ್ರದ ಜತ್ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಮತ್ತು ಈ ಪ್ರಕರಣದ ಕಾಗದ ಪತ್ರಗಳನ್ನು ಉಮದಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವಂತೆ ಇಂಡಿ ನ್ಯಾಯಾಲಯ ನೀಡಿದ್ದ ನೊಟೀಸ್ ನ್ನೂ ಕೂಡ ಪಿಎಸ್‌ಐ ತಮ್ಮ ನೀಡದೇ ತಮ್ಮ ಹತ್ತಿರವೇ ಇಟ್ಟುಕೊಂಡಿದ್ದರು.
ಅಲ್ಲದೇ, ಮೃತನ ವಾರಸುದಾರರ ಪತ್ತೆಗೆ ಸಂಬಂಧಿಸಿದಂತೆ ಆತನ ತಾಯಿಯ ಹಾಗೂ ಮೃತನ ಡಿಎನ್‌ಎ ಪರೀಕ್ಷೆಯನ್ನೂ ಸಹ ಕೈಗೊಳ್ಳದೇ, ಯಾವುದೇ ತನಿಖೆ ಪ್ರಕ್ರಿಯೆಗಳನ್ನೂ ಕೈಗೊಂಡಿರಲಿಲ್ಲ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ವಿಕಾಶ್ ಕುಮಾರ್ ವಿಕಾಶ್ ಆದೇಶ ಹೊರಡಿಸಿದ್ದಾರೆ.
ಸಂಜಯ ಕಲ್ಲೂರ ನೂತನ ಪಿಎಸ್ಐ
ಈ ಮಧ್ಯೆ, ಸಂಜಯ ಕಲ್ಲೂರ ಅವರನ್ನು ಚಡಚಣ ನೂತನ ಪಿಎಸ್ಐ ಆಗಿ ವರ್ಗಾವಣೆ ಮಾಡಲಾಗಿದೆ. ಇವರು ಈ ಮುಂಚೆ ವಿಜಯಪುರ ನಗರದಲ್ಲಿ ಸಂಚಾರಿ ವಿಭಾಗ, ಕೊಲ್ಹಾರ ಪೊಲೀಸ್ ಠಾಣೆ ಸೇರಿದಂತೆ ನಾನಾ ಕಡೆ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಜಯ ಕಲ್ಲೂರ ಅವರು ರವಿವಾರ ಚಡಚಣ ಪಿಎಸ್‌ಐ ಆಗಿ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆಯಿದೆ.