ಬಿ.ಎಲ್.ಡಿ.ಇ ಸಂಸ್ಥೆ ಬಸವ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ- ಅಥಣಿ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ

ವಿಜಯಪುರ: ಬಸವಾದಿ ಶರಣರ ಆಶಯದಂತೆ ಪ್ರಾರಂಭವಾದ ಬಿ.ಎಲ್.ಡಿ.ಇ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅಥಣಿಯ ಶ್ರೀ ಮೋಟಗಿಮಠದ ಶ್ರೀ ಪ್ರಭುಚನ್ನಬಸಸವ ಸ್ವಾಮೀಜಿ ಹೇಳಿದ್ದಾರೆ.

ನಗರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಆಯೋಜಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟೀಷರ ಆಡಳಿತದಲ್ಲಿ ಹಿಂದುಳಿದಿದ್ದ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ 1910ರಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಸ್ಥಾಪಿಸಿದ ಈ ಸಂಸ್ಥೆಯ ಅಭಿವೃದ್ಧಿಗೆ ದಾನಚಿಂತಾಮಣಿ ಶ್ರೀಮತಿ ಬಂಗಾರಮ್ಮ ಸಜ್ಜನ, ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು, ಶಿಕ್ಷಣ ಹರಿಕಾರ ದಿ. ಬಿ. ಎಂ. ಪಾಟೀಲರ ಜೊತಗೆ ಅನೇಕ ಜನರು ಶ್ರಮಿಸಿದ್ದಾರೆ.  ಈಗ ಹಾಲಿ ಅಧ್ಯಕ್ಷರಾದ ಎಂ. ಬಿ. ಪಾಟೀಲ ಅವರು ಡಾ. ಹಳಕಟ್ಟಿ, ಆದಿಲಶಾಹಿ, ಡಾ. ಎಂ. ಎಂ. ಕಲಬುರ್ಗಿ ಅವರ ಸಮಗ್ರ ಸಂಪುಟಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿರುವಂತೆ ಕ್ರಮ ಕೈಗೊಂಡಿದ್ದಾರೆ.  ಈ ಮೂಲಕ ಶಿಕ್ಷಣದ ಜೊತೆಗೆ ಜನರಿಗೆ ಜ್ಞಾನದಾಸೋಹವನ್ನೂ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ವಿಜಯಪುರ ಬಿ. ಎಲ್. ಡಿ. ಇ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ ಉದ್ಗಾಟಿಸಿ ಶ್ರೀ ಪ್ರಭುಚನ್ನಬಸಸವ ಸ್ವಾಮೀಜಿ ಮಾತನಾಡಿದರು

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ನಮ್ಮ ಸಾಧು, ಸಂತರು ಪೂಜೆ, ಪುನಸ್ಕಾರಗಳ ಜೊತೆ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡದೇ ಹೋಗಿದ್ದರೆ ನಾವು ನಿರಕ್ಷರಿಗಳಾಗಿ ಉಳಿಯಬೇಕಿತ್ತು.  ಬಿ.ಎಲ್.ಡಿ.ಇ ಸಂಸ್ಥೆ ಸಂಸ್ಥಾಪಕರ ದೂರದೃಷ್ಠಿಯ ಫಲವಾಗಿ ಇಂದು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದೆ.  ಡಾ. ಫ. ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಬಿ. ಎಂ. ಪಾಟೀಲ ಅವರು ಕಟ್ಟಿ ಬೆಳೆಸಿರುವ ಈ ಸಂಸ್ಥೆಯನ್ನು ಹಾಲಿ ಅಧ್ಯಕ್ಷರಾದ ಎಂ. ಬಿ. ಪಾಟೀಲ ಅವರು ಇಂದಿನ ಉದಾರೀಕರಣ, ಜಾಗತೀಕರಣ, ಖಾಸಗೀಕರಣಕ್ಕೆ ಅಗತ್ಯಕ್ಕೆ ಅನುಗುಣವಾಗಿ ಹೆಮ್ಮರವಾಗಿ ಬೆಳೆಸಿದ್ದಾರೆ.  ವಿಜಯಪುರದ ಜೊತೆ ಮತ್ತು ಜಮಖಂಡಿಯಲ್ಲಿಯೂ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿರುವ ಎಲ್ಲ ಅರ್ಹತೆ ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.

ಇಂದು ವಿನಯ ಮತ್ತು ವಿವೇಕ, ವಿವೇಚನೆ, ಸೇವಾ ಮನೋಭಾವನೆಗಳನ್ನು ಒಳಗೊಂಡಿರುವ ಶಿಕ್ಷಣದ ಅಗತ್ಯವಿದ್ದು, ಬಿ.ಎಲ್.ಡಿ.ಇ ಸಂಸ್ಥೆ ಜ್ಞಾನ, ಕೌಶಲ್ಯ, ಸ್ಪರ್ಧೆಯ ಜೊತೆಗೆ ಮಾನವೀಯತೆ ಮತ್ತು ಸಂಸ್ಕೃತಿಯ ಬಗ್ಗೆ ಆಸ್ಥೆಯನ್ನು ಬೆಳೆಸಿಕೊಳ್ಳುವ ಶಿಕ್ಷಣವನ್ನು ಕೊಡುವ ಮೂಲಕ ಮಾನವೀಯ ಮೌಲ್ಯದ ಶಿಕ್ಷಣವನ್ನು ನೀಡುತ್ತಿದೆ.  ನಾನು ಎಂಟ್ಹತ್ತು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ.  ಆದರೆ, ಎಂ. ಬಿ. ಪಾಟೀಲ ಅಧ್ಯಕ್ಷತೆಯ ಈ ಸಂಸ್ಥೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೇ ನಮಗೆ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಬಿ.ಎಲ್.ಡಿ.ಇ. ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಮಾತನಾಡಿ, ಬಿ.ಎಲ್.ಡಿ.ಇ ಸಂಸ್ಥೆ ಸಾಮಾನ್ಯರಿಗೆ ಶಿಕ್ಷಣ ನೀಡಿ ಜಾಣರನ್ನಾಗಿ ಮಾಡುವ ಕಾಯಕದಲ್ಲಿ ನಿರತವಾಗುವ ಮೂಲಕ ಸಂಸ್ಥಾಪಕರ ಕನಸನ್ನು ನನಸು ಮಾಡುತ್ತಿದೆ.  ಇಲ್ಲಿ ಬೋಧನೆ ಮಾಡಿದ ಶಿಕ್ಷಕರು ಮತ್ತು ಕಲಿತ ವಿದ್ಯಾರ್ಥಿಗಳ ಆದರ್ಶಗಳಿಂದ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಸಂಶೋಧನೆ ಮಾಡಿದ 59 ನಾನಾ ಪ್ರಾಧ್ಯಾಪಕರು ಹಾಗೂ ರ‍್ಯಾಂಕ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಆಡಳಿತಾಧಿಕಾರಿಗಳಾದ ಪ್ರೊ. ಬಿ. ಆರ್. ಪಾಟೀಲ, ಪ್ರೊ. ಎ. ಎಸ್. ಕಾಳಪ್ಪನವರ, ಪ್ರೊ. ಎಸ್. ಎಚ್. ಲಗಳಿ, ಕ್ರೀಡಾ ನಿರ್ದೇಶಕ ಪ್ರೊ. ಎಸ್. ಎಸ್. ಕೋರಿ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಡಾ. ಕುಶಾಲದಾಸ, ಪ್ರೊ. ಬಿ. ಎಂ. ನುಚ್ಚಿ, ವಿಶ್ರಾಂತ ಪ್ರಾಚಾರ್ಯರಾದ ಎಸ್. ಜಿ. ತಾಳಿಕೋಟಿ, ಎಂ. ಎಸ್. ಝಳಕಿ, ಎ. ಎಸ್. ಬಗಲಿ, ಡಾ. ವೈ. ಬಿ. ಪಟ್ಟಣಶೆಟ್ಟಿ, ಡಾ. ವಿ. ಡಿ. ಐಹೊಳ್ಳಿ, ನಾನಾ ಕಾಲೇಜುಗಳ ಪ್ರಾಚಾರ್ಯರು, ಬೋಧಕ, ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

ಡಾ. ಎಂ. ಎಸ್. ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮುತ್ತುರಾಜ ಮಾದನಭಾವಿ ಪ್ರಾರ್ಥಿಸಿದರು. ಕವಿತಾ ಹೆಗಡೆ, ದೀಪ್ತಿ ಭಟ್ ವಚನ ಸಂಗೀತ ಹಾಡಿದರು.  ಲಕ್ಷ್ಮಿ ಹಳಕಟ್ಟಿ, ಜ್ಯೋತಿ ಬಿರಾದಾರ ಹಾಗೂ ಸಂಗಡಿಗರು ಸಂಸ್ಥೆಯ ಗೀತೆ ಹಾಡಿದರು.  ಪ್ರಾಚಾರ್ಯ ಪ್ರೊ. ಬಿ. ಎಸ್. ಬೆಳಗಲಿ ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ರಶ್ಮಿ ಪಾಟೀಲ ಮತ್ತು ಪ್ರೊ. ದಾನಮ್ಮಾ ಗಿಡವೀರ ನಿರೂಪಿಸಿದರು. ಡಾ. ಭಾರತಿ ಮಠ ವಂದಿಸಿದರು.

Leave a Reply

ಹೊಸ ಪೋಸ್ಟ್‌