ವಿಜಯಪುರ: ಇಂಡಿ ಮತಕ್ಷೇತ್ರದ ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಆಡಳಿತಾರೂಢ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಡಿ ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಭೌತಿಕವಾಗಿ ಕಾಮಗಾರಿಗಳು ಮುಗಿದಿವೆ. ಆದರೆ, ಈ ಯೋಜನೆಗಳು ಪೂರ್ಣಗೊಂಡು 22 ವರ್ಷಗಳು ಕಳೆದರೂ ಈವರೆಗೂ ಕಾಲುವೆಯ ಟೇಲ್ ಎಂಡ(ಕೊನೆಯ ತುದಿ) ವರೆಗೂ ನೀರು ಹರಿಯುತ್ತಿಲ್ಲ. ಈಗ ಭೀಕರ ಬರ ಎದುರಾಗಿರುವ ಹಿನ್ನಲೆಯಲ್ಲಿ ರೈತರು, ಜನ, ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳ ವೈಫಲ್ಯದಿಂದಾಗಿ ನೀರು ಬರುತ್ತಿಲ್ಲ. ಕೂಡಲೇ ನೀರು ಹರಿಸದಿದ್ದರೆ ಅಧಿಕಾರದಲ್ಲಿದ್ದರೂ ಪ್ರಯೋಜನವಿಲ್ಲ. ಹೀಗಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿ ಆಗಿರಬೇಕು. ಜನರ ಆಷಯಗಳನ್ನು ಈಡೇರಿಸಲು ಆಗದಿದ್ದರೆ ರಾಜಕೀಯ ನಿವೃತ್ತಿಯಾಗಬೇಕು ಅಥವಾ ರಾಜಿನಾಮೆ ನೀಡಬೇಕು. ಇಂಡಿ ಮತಕ್ಷೇತ್ರದ ಕಟ್ಟ ಕಡೆಯ ರೈತರಿಗೆ ನೀರು ಸಿಗ್ಲುತ್ತಿಲ್ಲ. ಜನರಿಗೆ ನೀರು ಬರದಿದ್ದರೆ ಯಾವ ಪುರುಷಾರ್ಥಕ್ಕೆ ರಾಜಕಾರಣ ಮಾಡಬೇಕು. ಜನರ ಸಮಸ್ಯೆಯನ್ನು ನೇರವಾಗಿ ಎದೆಗಾರಿಕೆಯಿಂದ ಹೇಳುತ್ತೇನೆ. ಇಂಡಿ ತಾಲೂಕು ಸಂಪೂರ್ಣ ಸಮಸ್ಯೆಗೆ ಒಳಗಾಗಿದೆ. ಕುಡಿಯುವ ನೀರು, ಬೆಳೆಗಳಿಗೆ ನೀರಾವರಿಗೆ ನೀರು ಸಿಗದಂತಾಗಿದೆ. ನಾನಾ ಏತ ನೀರಾವರಿ ಯೋಜನೆಗಳಡಿ ಕಾಲುವೆಗಳಾದರೂ ನೀರು ಬರುತ್ತಿಲ್ಲ. ಅತ್ತ ಭೀಮಾನದಿಯಲ್ಲೂ ನೀರೂ ಸಿಗುತ್ತಿಲ್ಲ. ಉಜನಿ ಡ್ಯಾಂನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಪೈಪ್ ಲೈನ್ ಮಾಡುತ್ತಿದ್ದಾರೆ. ಅದಾದ ಬಳಿಕ ಉಜನಿ ಡ್ಯಾಂನಿಂದ ಭೀಮಾ ನದಿಗೆ ನೀರೇ ಬರುವುದಿಲ್ಲ. ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದು ಶಾಸಕರು ತಿಳಿಸಿದರು.
ನನ್ನ ಕ್ಷೇತ್ರದ ಜನರಿಗೆ ನೀರು ಸಿಗದೆ ಹೋದರೆ ಯಾವ ಹಂತಕ್ಕೆ ಹೋಗಲೂ ಸಿದ್ಧ. ನೀರು ಬರದೆ ಹೋದರೆ ನಾನು ಯಾರಿಗೂ ಕೇರ್ ಮಾಡುವುದಿಲ್ಲ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಇಂಡಿ ಶಾಖಾ ಕಾಲುವೆ ಮೂಲಕ ಹರಿಸಲಾಗುವ ನೀರು ಕೇವಲ ಇಂಡಿ ಗಡಿ ವರಗೆ ಮಾತ್ರ ಬರುತತ್ಿದ. ನನಗೆ ಪಕ್ಷದ ಬಗ್ಗೆ ಬದ್ಧತೆ ಇದೆ. ಕಾಂಗ್ರೆಸ್ ಪಕ್ಷದಿಂದಲೇ ರಾಜಕಾರಣ ಮಾಡಿದ್ದೇನೆ, ಇಲ್ಲಿಯೇ ನಿವೃತ್ತಿ ಆಗುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಇಂಡಿ ನೂತನ ಜಿ್ಲ್ಲೆಯಾಗದಿದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ
ಇಂಡಿಯನ್ನು ನೂತನ ಜಿಲ್ಲಾ ಕೇಂದ್ರ ಮಾಡುವ ನಿರ್ದಾರಕ್ಕೆನಾನು ಭದ್ಧನಾಗಿದ್ದೇನೆ. ಇದು ಬಹಳ ದಶಕಗಳ ಕೂಗು. ನಮ್ಮ ಪಕ್ಷದ ನಾಯಕರನ್ನು ಕೇಳಿಯೇ ಈ ವಿಚಾರದಲ್ಲಿ ಮಾತು ಕೊಟ್ಟಿದ್ದೇನೆ. ಇಂಡಿ ಜಿಲ್ಲಾ ಕೇಂದ್ರ ಮಾಡಲು 2028ರ ವರೆಗೂ ಅವಕಾಶವಿದೆ. ಅಲ್ಲಿಯವರೆಗೂ ಕಾಯುತ್ತೇನೆ. ನಮ್ಮ ಸರಕಾರ ಇಂಡಿ ಜಿಲ್ಲಾ ಕೇಂದ್ರ ಮಾಡುವ ಭರವಸೆ ಇದೆ. ಒಂದು ವೇಳೆ 2028 ರೊಳಗೆ ಇಂಡಿ ಜಿಲ್ಲಾ ಕೇಂದ್ರ ಮಾಡದಿದ್ದರೆ 2028ಕ್ಕೆ ರಾಜಕಾರಣದಲ್ಲಿ ಇರಲ್ಲ. ನಮ್ಮನ್ನು ರಾಜಕಾರಣದಲ್ಲಿ ಇಟ್ಟುಕೊಳ್ಳಬೇಕೆಂದರೆ ಇಂಡಿ ಜಿಲ್ಲಾ ಕೇಂದ್ರ ಮಾಡುತ್ತಾರೆ. ಬೇಡ ಎಂದರೆ ಬಿಟ್ಟಿರುತ್ತಾರೆ. ಮೈಕ್ರೋ ಮ್ಯಾನೇಜ್ಮೆಂಟ್ ಆ್ಯಂಡ್ ಎಡ್ಮಿನಿಸ್ಟ್ರೇಷನ್ ಗಾಗಿ ಇಂಡಿ ಜಿಲ್ಲಾ ಕೇಂದ್ರವಾಗಬೇಕು ಎಂದು ಅವರು ಪುನರುಚ್ಚರಿಸಿದರು.
ರಾಜಸ್ಥಾನ ಕರ್ನಾಟಕಕ್ಕಿಂತಲೂ ಕಡಿಮೆ ಶಾಸಕರನ್ನು ಹೊಂದಿದೆ. ಅಭಿವೃದ್ಧಿಯಲ್ಲೂ ಹಿಂದುಳಿದಿದೆ. ಅಲ್ಲಿ ಕೇವಲ 200 ಜನ ಶಾಸಕರಿದ್ದರೂ 52ಕ್ಕೂ ಹೆಚ್ಚು ಜಿಲ್ಲೆಗಳನ್ನು ಮಾಡಲಾಗಿದೆ. ಅದೇ ರೀತಿ ನಮ್ಮಲ್ಲಿಯೂ ಆಡಳಿತದ ದೃಷ್ಠಿಯಿಂದ ಇಂಡಿ ನೂತನ ಜಿಲ್ಲೆಯಾಗಬೇಕು. ಇಂಡಿ, ಚಡಚಣ, ದೇವರ ಹಿಪ್ಪರಗಿ, ಆಲಮೇಲ ಮತ್ತು ಸಿಂದಗಿ ತಾಲೂಕುಗಳನ್ನು ಸೇರಿಸಿ ನೂತನ ಜಿಲ್ಲೆ ಮಾಡಬೇಕು. ಜಿಲ್ಲಾ ವಿಭಜನೆಯಲ್ಲಿ ಆ ಭಾಗದ ಜನರ ಅಭಿಪ್ರಾಯ ಮುಖ್ಯವಾಗುತ್ತದೆ. ಈಗಾಗಲೇ ಈ ಕುರಿತು ಸಿಎಂ ಗಮನ ಸೆಳೆದಿದ್ದು, ರಾಜ್ಯ ಸರಕಾರದಿಂದ ವಿಜಯಪುರ ಜಿಲ್ಲಾಡಳಿತಕ್ಕೆ ಜನಾಭಿಪ್ರಾಯ ಸಂಗ್ರಹಿಸಲು ಸೂಚನೆ ಬಂದಿದೆ. ಹೀಗಾಗಿ ಇಂಡಿ ನೂತನ ಜಿಲ್ಲೆಯಾಗಬೇಕು. ಅದಾಗದಿದ್ದರೆ ಇಂಡಿ ಮತ್ತು ಸಿಂದಗಿ ತಾಲೂಕುಗಳಿಗೆ ವಿಶೇಷ ಸ್ಥಾನಮಾನ ನೀಡಿ ಕಲ್ಯಾಣ(ಹೈದರಾಬಾದ) ಕರ್ನಾಟಕ ಭಾಗಕ್ಕೆ ನೀಡಿರುವಂತ ಆರ್ಟಿಕಲ್ 371(ಜೆ) ಗೆ ಸೇರ್ಪಡ ಮಾಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಕೆಲವು ಸಚಿರವನ್ನು ಹೊರತು ಪಡಿಸಿದರೆ ಉಳಿದವರು ತಂತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಅವರಿಗೆ ಕಲ್ಪನೆಯೇ ಇಲ್ಲ ತಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಗಮನ ಹರಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಉಳಿದ ಶಾಸಕರು ಎಲ್ಲಿಗೆ ಹೋಗಬೇಕು? ಈ ತಾರತಮ್ಯದ ಹಿನ್ನೆಲೆಯಲ್ಲಿಯೇ ಈ ಹಿಂದೆ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದರು. ನಮಗೆ ಪ್ರತ್ಯೇಕ ರಾಜ್ಯ ಬೇಕಿಲ್ಲ. ಆದರೆ, ಆ ಭಾವನೆ ಬರುತ್ತಿದೆ ಎಂದು ಯಶವಂತರಾಯಗೌಡ ವಿ. ಪಾಟೀಲ ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ ಸಚಿವರು, ಶಾಸಕರು ತೆಲಂಗಾಣದಲ್ಲಿ ಪ್ರಚಾರ ವಿಚಾರ
ಕರ್ನಾಟಕದ 10 ಜನ ಸಚಿವರು ಮತ್ತು 40 ಜನ ಶಾಸಕರು ತೆಲಂಗಾಣದಲ್ಲಿ ಪ್ರಚಾರಕ್ಕೆ ತೆರಳಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಇದಕ್ಕೆ ಉತ್ತರ ಕೊಡಬೇಕು ಅವರನ್ನು ಕೇಳಿ. ನಾನು ನನ್ನ ಪರಿಮಿತಿಯಲ್ಲಿ ಮಾತ್ರ ಮಾತನಾಡುತ್ತೇನೆ. ಈ ಕುರಿತು ಸಂಬಂಧ ಪಟ್ಟವರನ್ನ ಕೇಳಿ. ನಾನು ಪಕ್ಷ ಮತ್ತು ಸರಕಾರದಲ್ಲಿ ಯಾವುದೇ ಹುದ್ದೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ, ಸಿಎಂ ವಿರುದ್ಧ ಪ್ರಧಾನಿ ವಾಗ್ದಾಳಿ ವಿಚಾರ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಡೆಯುತ್ತಿರುವ ಬಿಸಿಬಿಸಿ ಚರ್ಚೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಮುಂದೆ ಈ ವಿಚಾರ ಪ್ರಸ್ತಾಪವಿಲ್ಲ. ಸಿಎಂ ಬದಲಾವಣೆಯ ಕುರಿತು ನೀವು ಕೇಳಬಾರದು. ನಾನು ಹೇಳಬಾರದು. ನಿನ್ನೆಯೇ ಗೆದ್ದು ಇಲ್ಲಿ ಬಂದಿದ್ದೇವೆ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಈ ಪ್ರಶ್ನೆ ಯಾಕೆ ಬರುತ್ತವೆ? ಯಾಕೆ ಈ ಪ್ರಶ್ನೆ ಉದ್ಭವವಾಗುತ್ತವೆ? ಇದೆಲ್ಲ ಬರಬಾರದು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದಾರೆ. ಮೋದಿ ಅವರಿಗೆ ಆ ರೀತಿ ಅನಿಸಿರಬೇಕು. ಆದರೆ, ಆ ರೀತಿ ಇಲ್ಲ. ನಮ್ಮ ಸಿಎಂ ಸಿದ್ದರಾಮಯ್ಯನವರಷ್ಟು ಪ್ರಾಮಾಣಿಕ ಮತ್ತು ಶುದ್ಧ ಹಸ್ತರು ಯಾರೂ ಇಲ್ಲ. ಸಿದ್ದರಾಮಯ್ಯ ಅವರ ಕುರಿತು ಪಿಎಂ ಹೇಳಿಕೆ ರಾಜಕೀಯ ಪ್ರೇರಿತ ಆದರೆ ವಾಸ್ತವದಿಂದ ಕೂಡಿಲ್ಲ. ಪಿಎಂ ಮೋದಿ ಮಧ್ಯಪ್ರದೇಶದಲ್ಲಿಯೂ ಸಿದ್ದರಾಮಯ್ಯನವರ ಹೆಸರು ಹೇಳುತ್ತಾರೆಂದರೆ ಸಿದ್ದರಾಮಯ್ಯರ ಜನಪ್ರಿಯತೆಯನ್ನು ನಾವು ಗಮನಿಸಬೇಕು. ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳಿಂದ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಳ್ಳುತ್ತಿರಬಹುದು. ಸಿದ್ದರಾಮಯ್ಯನವರ ಜನಪ್ರೀತಿಯನ್ನು ಸೂಕ್ಷ್ಮವಾಗಿ ಪ್ರಧಾನಿ ಗಮನಿಸಿರಬಹುದು ಎಂದು ಯಶವಂತರಾಯಗೌಡ ವಿ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಸದಸ್ಯ ಗುರನಗೌಡ ಪಾಟೀಲ ಮತ್ತು ಮುಖಂಡ ಎಂ. ಆರ್. ಪಾಟೀಲ ಬಳ್ಳೊಳ್ಳಿ ಉಪಸ್ಥಿತರಿದ್ದರು.