ವಿಜಯಪುರ: ತೆರಿಗೆಯಿಂದ ಬಂದ ಹಣದಲ್ಲಿ ಮಸೂತಿ, ಕೂಡಗಿ, ತೆಲಗಿ ಮುತ್ತಗಿ ಮತ್ತು ಗೊಳಸಂಗಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಸೂಚನೆ ನೀಡಿದ್ದಾರೆ.
ಕೊಲ್ಹಾರ ತಾಲೂಕಿನ ಕೂಡಗಿ ಎನ್ ಟಿ ಪಿ ಸಿ ಸಭಾಭವನದಲ್ಲಿ ನಡೆದ 11ನೇ ಗ್ರಾಮ ಅಭಿವೃದ್ದಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಬಾಕಿ ಮತ್ತು ಇನ್ನೂ ಆರಂಭವಾಗದ ಕಾಮಗಾರಿಗಳ ಬಗ್ಗೆ ಒಂದು ವಾರದಲ್ಲಿ ಕ್ರಮ ಕೈಗೊಂಡು ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎನ್ ಟಿ ಪಿ ಸಿ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಬೇಕು. ಸವಳು ಜವಳು ಕುರಿತು ಹೈದರಾಬಾದ ತಂತ್ರಜ್ಞರ ವರದಿ ಅಂಶ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಬಾಧಿತ ಗ್ರಾಮದ ಗ್ರಾಮಸ್ಥರ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಬೇಕು. ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಅನುದಾನದಲ್ಲಿ ಆರೋಗ್ಯ ತಾಂತ್ರಿಕ ಶಿಕ್ಷಣಕ್ಕಾಗಿ ಕ್ರೀಯಾ ಯೋಜನೆ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧ್ಯಕ್ಷತೆ ವಹಿಸಿದ್ದರು. ಎಸ್ಪಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಕೊಲ್ಹಾರ ತಹಸೀಲ್ದಾರ ಸೇರಿದಂತೆ ತಾಲೂಕಿನ ನಾನಾ ಇಲಾಖೆ ಅಧಿಕಾರಿಗಳು, ಎನ್‌ಟಿಪಿಸಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಸಲಹಾ ಸಮಿತಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಸ್ವಾಗತಿಸಿದರು.