ಮರದ ಕೊಂಬೆ ಬಿದ್ದು ಮೆದುಳಲ್ಲಿ ರಕ್ತಸ್ರಾವವಾಗಿದ್ದ ವ್ಯಕ್ತಿಗೆ ಫೋರ್ಟೀಸ್ ಆಸ್ಪತ್ರೆ ವೈದ್ಯರ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ- ಡಾ. ರಾಜಕುಮಾರ್ ದೇಶಪಾಂಡೆ

ಬೆಂಗಳೂರು: ಮರದ ಕೊಂಬೆ ತಲೆ ಮೇಲೆ ಬಿದ್ದು ಮೆದುಳಿನ ಭಾಗದಲ್ಲಿ ರಕ್ತ ಸ್ರಾವವಾಗಿ ಸಾವಿನ ದವಡೆಯಲ್ಲಿದ್ದ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ರಾಜಕುಮಾರ್ ದೇಶಪಾಂಡೆ, ೩೫ ವರ್ಷದ ವ್ಯಕ್ತಿ ಬೆಳಗ್ಗಿನ ಜಾವ ಉದ್ಯಾನವನದಲ್ಲಿ ವಾಕಿಂಗ್‌ ಮಾಡುವ ವೇಳೆ ಮರದ ಕೊಂಬೆಯೊಂದು ನೇರವಾಗಿ ಅವರ ತಲೆ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಗಾಯವಾಗಿ ಸಾಕಷ್ಟು ರಕ್ತ ಕಳೆದುಕೊಂಡಿದ್ದರು. ತಲೆ ಬಿದ್ದ ಪೆಟ್ಟಿನಿಂದ ಮೆದುಳಿಗೆ ಹಾನಿಯಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ತಿಳಿದುಬಂದಿದ್ದರಿಂದ ಕೂಡಲೇ ಅವರನ್ನು CT ಗೆ ಒಳಪಡಿಸಲಾಯಿತು, ಈ ವೇಳೆ ಅವರ ಮೆದುಳಿನಲ್ಲಿ ಆವರಿಸುವ ಪೊರೆಗಳ ನಡುವೆ (ಮೆನಿಂಜಸ್) ಬಲಭಾಗದಲ್ಲಿ 1.6 ಸೆಂ.ಮೀ ದಪ್ಪದಲ್ಲಿ ರಕ್ತ ಸ್ರಾವವಾಗಿ, ಹೆಪ್ಪುಗಟ್ಟಿರುವುದು ತಿಳಿದು ಬಂತು. ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯು ಸಾವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದಷ್ಟೇ ಅಲ್ಲದೆ, ಮೆದುಳಿನ ಇತರೆ ಭಾಗಗಳಿಗೂ ಮೂಗೇಟುಗಳಾಗಿರುವುದು ತಿಳಿದುಬಂತು, ಜೊತೆಗೆ, ಕಣ್ಣು, ಹಣೆ, ಕೆನ್ನೆಯ ಮೂಳೆಗಳು ಸಹ ಮುರಿದಿದ್ದವು.

ಹೀಗಾಗಿ ತುರ್ತು ಬಲ ಫ್ರಂಟೊ-ಟೆಂಪೊರೊ-ಪ್ಯಾರಿಯೆಟಲ್ ಡಿಕಂಪ್ರೆಸಿವ್ ಕ್ರಾನಿಯೆಕ್ಟಮಿಯನ್ನು ಮಾಡಿದ್ದೇವೆ, ಇದರಲ್ಲಿ ತಲೆಯ ಬಲಭಾಗದಲ್ಲಿರುವ ತಲೆಬುರುಡೆಯ ಮೂಳೆಯ ಭಾಗವನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಯಿತು, ಇದು ಮೆದುಳನ್ನು ಹಿಗ್ಗಿಸಲು ಮತ್ತು ಊತ ಅಥವಾ ರಕ್ತಸ್ರಾವದಿಂದ ಉಂಟಾಗಿರುವ ಪರಿಣಾಮವನ್ನು ಸರಿದೂಗಿಸಲು ಸಹಾಯ ಮಾಡಲಿದೆ. ೪ ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ಸೂಕ್ಷ್ಮವಾಗಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದೆವು, ಸದ್ಯ ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

Leave a Reply

ಹೊಸ ಪೋಸ್ಟ್‌