ವಿಜಯಪುರ: ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸಾಯಿಟಿಯ 34ನೇ ರಾಷ್ಟ್ರೀಯ ಸಮ್ಮೇಳನ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನವೆಂಬರ್ 1 ಬುಧವಾರದಿಂದ ನವೆಂಬರ್ 3ರ ಶುಕ್ರವಾರದ ವರೆಗೆ ನಡೆಯಿತು.
ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸೈಟಿಯ ಈ ಸಮ್ಮೇಳನವನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೊಧನಾ ಕೇಂದ್ರದ ಶರೀರ ಕ್ರಿಯಾ ಶಾಸ್ತ್ರ ವಿಭಾಗ ಆಯೋಜಿಸಿತ್ತು.
ಸಮ್ಮೆಳನದ ಮೊದಲ ದಿನ ನಿರಂತರ ವೈದ್ಯಕೀಯ ಶಿಕ್ಷಣ ಹಾಗೂ ಕಾರ್ಯಾಗಾರವನ್ನು ನಡೆಯಿತು. ಈ ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ದು:ಖಸ್ಥಿತಿ ಶಾರೀರಿಕ ಶಾಸ್ತ್ರ- ಇತ್ತಿಚಿನ ಪ್ರವೃತ್ತಿ ಹಾಗೂ ಪ್ರಗತಿಗಳು ಎಂಬ ದು ಧ್ಯೇಯ ವಾಕ್ಯವಾಕ್ಯದಡಿ ನಡೆದ ಗೋಷ್ಠಿಗಳಲ್ಲಿ ಆರು ಪರಿಣಿತ ವೈದ್ಯರು ಆಯ್ದ ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಿದರು. ಮಧ್ಯಾಹ್ನ ನುರಿತ ಯೋಗಪಟುಗಳು ಮತ್ತು ನೋಂದಾಯಿತ ಅಭ್ಯರ್ಥಿಗಳಿಂದ ಯೋಗಾಸನದ ನಾನಾ ಭಂಗಿಗಳು ಹಾಗೂ ಧ್ಯಾನದ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ಸಮ್ಮೇಳನದ ಎರಡನೇ ಮತ್ತು ಮೂರನೇ ದಿನ ನಡೆದ ಮುಖ್ಯ ಸಮ್ಮೇಳನವನ್ನು ಸಮ್ಮೆಳನದಲ್ಲಿ ಶರೀರಕ್ರಿಯಾಶಾಸ್ತ್ರ: ಪ್ರಯೋಗಶಾಸ್ತ್ರದಿಂದ ಅನುವಾದಿತ ವೈದ್ಯಶಾಸ್ತ್ರದತ್ತ ಎಂಬ ಘೋಷವಾಕ್ಯದಡಿ ನಡೆದ ಕಾರ್ಯಕ್ರಮವನ್ನು ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ. ರಾಜನ ಹಲ್ದಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರಕ್ರಿಯಾಶಾಸ್ತ್ರ ವಿಭಾಗದ ಪ್ರಧಾನ ವೈಜ್ಞಾನಿಕ ಸಲೆಹೆಗಾರರು ಮತ್ತು ಪ್ರಾಧ್ಯಾಪಕ ಡಾ. ಕುಶಾಲ ಕೆ. ದಾಸ ಉದ್ಘಾಟಾಸಿದರು.
ಈ ಕಾರ್ಯಕ್ರಮದಲ್ಲಿ ದೆಹಲಿಯ ಏಐಐಎಂಎಸ್ ನ ನಿವೃತ್ತ ಡೀನ್ ಹಾಗೂ ಐಐಟಿ ಯ ಜೀವವೈದ್ಯಕೀಯ ತಂತ್ರಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ಕೆ. ಕೆ. ದೀಪಕ ಅವರು ಪ್ರತಿಷ್ಠಿತ ಎಸ್. ಸಿ. ಮಹಾಲಾನ್ ಬಿಸ್ ಸ್ಮಾರಕ ವಿಶೇಷ ಭಾಷಣ ಮಾಡಿದರು.
ಈ ಸಮ್ಮೆಳನದಲ್ಲಿ ಶರೀರ ಕ್ರಿಯಾ ವಿಜ್ಞಾನಕ್ಕೆ ಸಂಬಂಧಪಟ್ಟ ಯೋಗವಿಜ್ಞಾನ, ರಕ್ತನಾಳಶಾಸ್ತ್ರ ನರಮಂಡಲಶಾಸ್ತ್ರ, ಪರಿಸರ ಶಾಸ್ತ್ರ ಹಾಗೂ ಕೃತಕ ಬುದ್ಧಿಮತ್ತೆ ಮುಂತಾದ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಾಯಿತು.
ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುದೋಳ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸೈಟಿ ಅಧ್ಯಕ್ಷಡಾ. ಅಮರ ಕೆ.ಚಂದ್ರ, ಪ್ರಧಾನ ಕಾರ್ಯದರ್ಶಿ ಡಾ. ರಾಜನ ಹಲ್ದಾರ, ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಉಪಸ್ಥಿತರಿದ್ದರು. ಸಮ್ಮೇಳನ ಆಯೊಜನಾ ಸಮಿತಿಯ ಅಧ್ಯಕ್ಷೆ ಡಾ. ಸುಮಂಗಲಾ ಪಾಟೀಲ ಸ್ವಾಗತಿಸಿದರು. ಡಾ. ಶ್ರೀಲಕ್ಷ್ಮೀ ಬಗಲಿ ಪರಿಚಯಿಸಿದರು.
ರಾಷ್ಟ್ರೀಯ ಮತ್ತು ಅಂತಾರಾಷ್ತ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳಾದ ನವದೆಹಲಿಯ ಝಾಮಿಯಾ ಹಮ್ದರ್ದ್ ವಿಶ್ವವಿದ್ಯಾಲಯದ ಡಾ. ಮೊಹ್ಮದ್ ಇಕ್ಬಾಲ್ ಆಲಂ, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡಾ. ಪಿ. ಎಸ್. ಶಂಕರ, ಬ್ರೇಝಿಲ್ ನ ಪ್ರೊ. ಬೆನಿಡಿತೊ ಎಚ್. ಮಶಾಡೋ, ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಪ್ರೊ. ಟ್ರೆವರ್ ಎಸ್. ಮೆಕ್ಸಿಕೋದ ಡಾ. ಜೋಸ್ ಆಂಟೋನಿಯೋ ಕಾರ್ಮೊಸ್ ಸಾವ್ರೆಜೊ, ಜೋಧಪುರ ಎಐಐಎಂಎಸ್ ನ ಡಾ. ಪ್ರಸನ್ನ ಪ್ರಿಯ ನಾಯಕ ಮುಂತಾದವರು ತಮ್ಮ ವಿಶೇಷ ಉಪನ್ಯಾಸ ಮಂಡಿಸಿದರು. ಈ ಸಂದರ್ಭದಲ್ಲಿ ಸೊಸಾಯಿಟಿಯಿಂದ ನೀಡಲಾಗುವ ಆರು ರಾಷ್ತ್ರೀಯ ವಿಶೇಷ ಉಪನ್ಯಾಸಗಳಲ್ಲಿ ಒಂದಾದ ಪ್ರೋ. ಬಿ. ಬಿ. ಸರ್ಕಾರ್ ಸ್ಮಾರಕ ಸ್ವರ್ಣ ಪದಕ ವಿಶೇಷ ಉಪನ್ಯಾಸವನ್ನು ಡಾ. ಲತಾ ಮುಳ್ಳೂರ ಪ್ರಕಟಿಸಿದರು.
ರಾಷ್ರ್ಟೀಯ ಶರೀರ ಶಾಸ್ತ್ರಜ್ಞರ ಸೊಸೈಟಿಯ ಉದಯೋನ್ಮುಖ ವಿಜ್ಞಾನಿ ಸ್ವರ್ಣ ಪದಕ ಪ್ರಶಸ್ತಿಗಳನ್ನು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ರೋಗನಿದಾನ ಶಾಸ್ತ್ರ ವಿಭಾಗದ 2ನೆ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಸಯನ್ ದೀಪ ದಾಸ್ ಮತ್ತು ಜೀವರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸೌಮ್ಯ ತುಂಗಳ ಅವರಿಗೆ ಪ್ರಧಾನ ಮಾಡಲಾಯಿತು.
ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 250 ಪ್ರತಿನಿಧಿಗಳು ಈ ಸಮ್ಮೆಳನದಲ್ಲಿ ಪಾಲ್ಗೊಂಡಿದ್ದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರಿ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೊಧನಾ ಕೇಂದ್ರದ ಶರೀರ ಕ್ರಿಯಾ ಶಾಸ್ತ್ರ ವಿಭಾಗ ಈ ಸಮ್ಮೇಳನವನ್ನು ಆಯೋಜಿಸಿತ್ತು.