ವಿಜಯಪುರ: ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳ ಬಗ್ಗೆ ಸಾರ್ವಜನಿಕರು ಅರಿತುಕೊಂಡು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ, ವಿಜಯಪುರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆಹರು ಯುವ ಕೇಂದ್ರ, ವಿಜಯಪುರ ಇವರುಗಳ ಸಹಯೋಗದಲ್ಲಿ ನಗರದ ಪಿ ಡಿ ಜೆ ಪದವಿ ವೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ, ಏಕ ಭಾರತ ಶ್ರೇಷ್ಠ ಭಾರತ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ಕೇಂದ್ರ ಸರಕಾರದ ಯೋಜನೆಗಳು, ಪ್ರಧಾನಮಂತ್ರಿಯವರ ದೂರದರ್ಶಿತ್ವ-2047, ವೋಕಲ್ ಪಾರ್ ಲೋಕಲ್ ಹಾಗೂ ಇತರೆ ಯೋಜನೆಗಳ ಕುರಿತ ಛಾಯಾಚಿತ್ರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ದೇಶ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ. ವಿಜಯಪುರ ಜಿಲ್ಲೆ ಉತ್ತಮ ರಸ್ತೆ ಸೇರಿದಂತೆ ಹೆದ್ದಾರಿಗಳನ್ನು ಹೊಂದಿದೆ. ಕೇಂದ್ರ ಸರಕಾರದ ಯೋಜನೆಗಳಿಂದ ರಾಜ್ಯ ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವ್ಥದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ ಕೆ ಚವ್ಹಾಣ ಮಾತನಾಡಿ ಕೇಂದ್ರ ಸರಕಾರದ ಯೋಜನೆಯಲ್ಲೊಂದಾದ ಬೇಟಿ ಬಚಾವೂ ಬೇಟಿ ಪಡಾವೂ ಅಡಿಯಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣ, ಯಶಸ್ಸು ಕಂಡಿದ್ದು ಲಿಂಗಾನುಪಾತದಲ್ಲಿ ವಿಜಯಪುರ ಜಿಲ್ಲೆ ಸಾಕಷ್ಟು ಸುಧಾರಣೆ ಕಂಡಿದೆ. ಉಳಿದಂತೆ ಗರ್ಭೀಣಿ ಮತ್ತು ತಾಯಂದಿರ ಆರೋಗ್ಯ ರಕ್ಷಣೆಗೆ ಇಲಾಖೆ ಶ್ರಮಿಸಿದ್ದು ಜನರು ಅಂಗನವಾಡಿಗೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ವಾಸುದೇವ ಹೆರಕಲ, ಯುವಕರು ಅಗ್ನಿಪಥ ಯೋಜನೆಯಡಿ ಸೇನೆಗೆ ಸೇರಬೇಕು. ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದ್ದು ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮೇಲ್ವಿಚಾರಕಿ ಭಾರತಿ ಪಾಟೀಲ್ ಅವರು ಮಾತನಾಡಿದರು.
ಈ ಇದೇ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಪಿ. ಡಿ. ಜೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯಡಿ. ಕೆ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ರಾಹುಲ ಡೋಂಗ್ರೆ, ಗಾಂಧಿ ಉಪಾಸಕ ನೇತಾಜಿ ಗಾಂಧಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರು, ಕೇಂದ್ರ ಸಂವಹನ ಇಲಾಖೆಯ, ನಾಗಪ್ಪ ಅಂಬಾಗೋಳ ಉಪಸ್ಥಿತರಿದ್ದರು.
ಕೇಂದ್ರ ಸಂವಹನ ಇಲಾಖೆಯ ಸಿ. ಕೆ. ಸುರೇಶ ಸ್ವಾಗತಿಸಿದರು. ಉಪನ್ಯಾಸಕ ಸಂತೋಷ ಹೆಗ್ಡೆ ಮತ್ತು ಎಚ್. ಜೆ. ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಜಿ. ಆರ್. ಪುರಾಣಿಕ ವಂದಿಸಿದರು.
ಪ್ರದರ್ಶನ: ಕೇಂದ ಸರಕಾರದ 9 ವರ್ಷಗಳ ಸೇವೆ, ಸಾಧನೆ, ಉತ್ತಮ ಆಡಳಿತ ಹಾಗೂ ಯೋಜನೆಗಳ ಕುರಿತ ಛಾಯಾಚಿತ್ರಗಳ ಪ್ರದರ್ಶನವನ್ನು ನವೆಂಬರ 10ರ ವರೆಗೆ ಏರ್ಪಡಿಸಲಾಗಿದೆ.