ಬಸವ ನಾಡಿನಲ್ಲಿ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ- ಬಿ. ವೈ. ವಿಜಯೇಂದ್ರ ಪರ ಜಯಕಾರ

ವಿಜಯಪುರ: ಶಿಕಾರಿಪುರ ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರದಲ್ಲಿ ಬಿ ಜೆ ಪಿ ಕಾರ್ಯಕರ್ತರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಆದೇಶ ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪರಸ್ಪರ ಕರೆ ಮಾಡಿ ಸಂಭ್ರಮಿಸಲವು ನಿರ್ಧರಿಸಿದರು.  ಅದರಂತೆ ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದರು.  ಬಳಿಕ ಪರಸ್ಪರ ಸಿಹಿ ತಿನ್ನಿಸಿ, ಬಿ. ವೈ. ವಿಜಯೇಂದ್ರ, ಬಿ ಜೆ ಪಿ ಮತ್ತು ಅಪ್ಪು ಪಟ್ಟಣಶೆಟ್ಟಿ ಪರ ಜಯಘೋಷ ಹಾಕಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ. ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು ಬಹಳ ಸಂತೋಷ ತಂದಿದೆ.  ಬಹಳ ದಿನಗಳಿಂದ ಯಾರು ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಗೊಂದಲ ಕಾರ್ಯಕರ್ತರಲ್ಲಿ ಮೂಡಿತ್ತು ಯುವಕರ ಆಶಾಕಿರಣ, ನಮ್ಮೆಲ್ಲರ ಯುವ ನಾಯಕರಾದ ಬಿ. ವೈ. ವಿಜಯೇಂದ್ರ ಅವರಿಗೆ ಬಿಜೆಪಿ ಸಾರಥ್ಯ ವಹಿಸಿರುವುದು ಬಿಜೆಪಿ ಕಾರ್ಯಕರ್ತರಿಗೆ ಮತ್ತು ನಮಗೆಲ್ಲರಿಗೂ ಬಹಳ ಸಂತೋಷ ತಂದಿದೆ.  ಪಕ್ಷದ ಸಂಘಟನೆಯನ್ನು ಬಲಪಡಿಸುವ ಗುರಿಗೆ ಈ ನೇಮಕ ಬಲ ತುಂಬಲಿದೆ ಎಂದು ಹೇಳಿದರು.

ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು

ಬಿ. ವೈ. ವಿಜಯೇಂದ್ರ ಸಮರ್ಥವಾಗಿ ನಾಯಕತ್ವ ನಿಭಾಯಿಸಲಿದ್ದಾರೆ. ಈಗಾಗಲೇ ಅವರು ಉಪಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ.  ಮುಂಬರುವ ದಿನಗಳಲ್ಲಿ ಲೋಕಸಭೆ ಚುನಾವಣೆ ಜೊತೆಗೆ, ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ವಿಜಯಪುರ ನಗರದಲ್ಲಿ ಬಿಜೆಪಿ ಬಲಿಷ್ಠವಾಗಿದೆ.  ನಾಯಕತ್ವ ಬದಲಾವಣೆ ಸಹಜ.  ವಿಜಯೇಂದ್ರ ಅಭಿಮಾನಿಗಳು, ಬಿ. ಎಸ್. ಯಡಿಯೂರಪ್ಪ ಅಭಿಮಾನಿಗಳು, ಬಿಜೆಪಿ ಅಭಿಮಾನಿಗಳು ಎಲ್ಲರೂ ಒಂದೇ.  ಯಾರೂ ಬೇರೆ ಅಲ್ಲ.  ಎಲ್ಲರೂ ಕೂಡ ಯಡಿಯೂರಪ್ಪ ನಾಯಕತ್ವದಲ್ಲಿ ನಾವು ಕೆಲಸ ಮಾಡಿದ್ದೇವೆ.  ಇನ್ನು ಮುಂದೆ ಬಿ. ವೈ. ವಿಜಯೇಂದ್ರ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ.  ವಿಜಯಪುರ ನಗರದಲ್ಲಿ ಯಾರು ಇದ್ದರೂ ಅಷ್ಟೇ, ಬಿಟ್ಟರೂ ಅಷ್ಟೇ.  ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಲ್ಲಿಯೇ ಇದ್ದಾರೆ.  ಇಲ್ಲಿಯೇ ಕೆಲಸವನ್ನು ಮಾಡುತ್ತಾರೆ.  ಕೆಲಸ ಕಡಿಮೆ, ಹೆಚ್ಚಾಗಬಹುದು.  ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ವಿಜಯಪುರ ಜನತೆಗೆ ಸಂತಸ ತಂದಿದೆ.  ಬಹಳಷ್ಟು ಕಾರ್ಯಕರ್ತರಿಗೆ ಹುರುಪು ತುಂಬಿದೆ.  ಚೈತನ್ಯ ಬಂದಿದೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ನಗರಸಭೆ ಮಾಜಿ ಸದಸ್ಯ ಅಪ್ಪು ಸಜ್ಜನ, ಬಿಜೆಪಿ ಮುಖಂಡರಾದ ಸಿದ್ಧರಾಮಯ್ಯ ಮಲ್ಲಿಕಾರ್ಜುನಮಠ, ಆನಂದ ಮುಚ್ಚಂಡಿ, ಕಾಂತು ಶಿಂಧೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌