ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ನವೆಂಬರ್ 14 ರಿಂದ ನವೆಂಬರ್ 16ರ ವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ನವೆಂಬರ್ 14 ರಂದು ಮಂಗಳವಾರ ರಾತ್ರಿ ವಿಜಯಪುರಕ್ಕೆ ಆಗಮಿಸಲಿರುವ ಅವರು ವಾಸ್ತವ್ಯ ಮಾಡಲಿದ್ದಾರೆ.
ನವೆಂಬರ್ 15 ರಂದು ಬುಧವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿಜಯಪುರ ಜಿಲ್ಲೆಯ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ, ಬರ ನಿರ್ವಹಣೆ ಕುರಿತು ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ.
ಸಂಜೆ 5 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ವಿಜಯಪುರ ಜಿಲ್ಲೆಯ ನಾನಾ ತಾಲೂಕುಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆ ಕುರಿತು ಕೈಗೊಂಡ ಕ್ರಮಗಳ ಕುರಿತು ಜಿಲ್ಲೆಯ ಎಲ್ಲ ವಿಧಾನ ಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಲಿದ್ದಾರೆ. ಬಳಿಕ ರಾತ್ರಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ನವೆಂಬರ್ 16 ರಂದು ಗುರುವಾರ ಸಂಜೆ 4.30ಕ್ಕೆ ವಿಜಯಪುರದಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ಮತ್ತು ನಂತರ ರಾತ್ರಿ 9 ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.