ಆನಲೈನ್ ವಂಚನೆ- ನೈಜಿರಿಯಾ ಮೂಲದ ಪೀಟರ್, ಹ್ಯಾಪಿ, ಸ್ಟ್ಯಾನ್ಲಿ ಬಂಧಿಸಿದ ಬಸವ ನಾಡಿನ ಸಿಇಎನ್ ಪೊಲೀಸರು

ವಿಜಯಪುರ: ನಗರದ ಜವಳಿ ಉದ್ಯಮಿಯೊಬ್ಬರಿಗೆ ಆನಲೈನ್ ಮೂಲಕ ವಂಚಿಸಿದ್ದ ನೈಜಿರಿಯಾ ಮೂಲದ ಮೂರು ಜನರನ್ನು ಬಂಧಿಸುವಲ್ಲಿ ವಿಜಯಪುರ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಕ್ರಿಪ್ಟೋ ಮೈನಿಂಗ್ ನಲ್ಲಿ ಹೂಡಿಕೆ ಮಾಡಿದರೆ ಹಾಕಿದ ಬಂಡವಾಳದ ಹಣದ ಜೊತೆಗೆ ಶೇ. 200 ರಷ್ಟು ಲಾಭಾಂಶ ಕೊಡುವದಾಗಿ ಹೇಳಿ ಈ ಆರೋಪಿಗಳು ನಾನಾ ಸುಳ್ಳು ಸಬೂಬೂಗಳನ್ನು ಉದ್ಯಮಿಯಿಂದ ನಾನಾ ಹಂತಗಳಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ರೂ. 59 ಲಕ್ಷ 12 ಸಾವಿರದ 765  ಹಣವನ್ನು ಹಾಕಿಸಿಕೊಂಡಿದ್ದರು.  ಅಲ್ಲದೇ, ಉದ್ಯಮಿಗೆ ಯಾವುದೇ ಲಾಭಾಂಶ ಕೊಡದೇ ಹಣ;ನ್ನೂ ಮರಳಿಸದೇ ಆನಲೈನ್ ಮೂಲಕ ವಂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಉದ್ಯಮಿ ವಿಜಯಪುರ ಸಿ ಇ ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ದೊಡ್ಡ ಸವಾಲಾಗಿದ್ದ ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿ ಇ ಎನ್ ಪೊಲೀಸರು ಕಲಂ 66(ಸಿ), 66(ಡಿ), ಐಟಿ ಆ್ಯಕ್ಟ್- 2008 ಮತ್ತು 419, 420ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.  ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಎಎಸ್ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನದಲ್ಲಿ ಸಿ ಇ ಎನ್ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ತನಿಖೆ ನಡೆಸಲು ತಂಡ ರಚಿಸಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿ ಇ ಎನ್ ಪೊಲೀಸರು ತಾಂತ್ರಿಕ ಸಾಕ್ಷ್ಯಗಳಾದ ಮೊಬೈಲ್ ಕರೆ ದಾಖಲೆಗಳು, ಆರೋಪಿಗಳು ವಾಸಿಸುತ್ತಿದ್ದ ಸ್ಥಳ, ಮೊಬೈಲ್ ಸಿಮ್ ಮತ್ತೀತರ ದಾಖಲೆಗಳನ್ನು ಸಂಗ್ರಹಿಸಿದರು.  ನಂತರ 06.10.2023 ರಂದು ಕಿನ್ಯಾ ದೇಶದ ಪ್ರಜೆ ಸೇರಿ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದರು. ಅದರ ಮುಂದುವರೆದ ಭಾಗವಾಗಿ ಈಗ ಮತ್ತೆ ಮೂರು ಜನರನ್ನು ಬೆಂಗಳೂರಿನಲ್ಲಿ ಬಂಧಿಸಿ ವಿಜಯಪುರಕ್ಕೆ ಕರೆತರಲಾಗಿದೆ.

ಓಸೆಮುದಿಯಾಮೆನ್ ಇದೆಮುದೀಯನ್

 

ಎಮೆಕಾ ಹ್ಯಾಪಿ ನ್ವಾವ್ಲಿಸಾ
ಓಬಿನ್ನಾ ಸ್ಟ್ಯಾನ್ಲೆ ಇಹೆಕ್ವೆರೆನಾ

ನೈಜೀರಿಯಾ ಮೂಲದ ಮತ್ತು ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದಿದ್ದ ಓಸೆಮುದಿಯಾಮೆನ್ ಉರ್ಫ್ ಪೀಟರ್ ಇದೆಮುದೀಯನ್(38), ಉದ್ಯೋಗಕ್ಕಾಗಿ ಬಂದಿದ್ದ ಎಮೆಕಾ ಉರ್ಫ್ ಹ್ಯಾಪಿ ನ್ವಾವ್ಲಿಸಾ(40) ಮತ್ತು ಓಬಿನ್ನಾ ಸ್ಟ್ಯಾನ್ಲೆ ಇಹೆಕ್ವೆರೆನಾ(42) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.   ಇವರೆಲ್ಲರೂ ಸೇರಿಕೊಂಡು ಈ ವಂಚನೆ ನಡೆಸುತ್ತಿದ್ದರು.   ಈ ಬಂಧಿತ ಆರೋಪಿಗಳಿಂದ ಆನಲೈನ್ ವಂಚನೆಗೆ ಬಳಸಿದ ನಾನಾ ಕಂಪನಿಗಳ 21 ಮೊಬೈಲುಗಳು, 18 ಸಿಮ್ ಕಾರ್ಡ್ಗುಳ, 1 ಲ್ಯಾಪಟಾಪ್, 2 ಪೆನಡ್ರೈವ್, 1 ಡೋಂಗಲ್, 2 ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಂಡು ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದಾರೆ. ಅಲ್ಲದೇ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಿಪಿಐ ರಮೇಶ ಅವಜಿ ಜೊತೆಗೆ, ಪಿ.ಎಸ್.ಐ ಮಲ್ಲಿಕಾರ್ಜುನ ತಳವಾರ, ಪಿ. ವೈ. ಅಂಬಿಗೇರ, ಪೊಲೀಸ್ ಸಿಬ್ಬಂದಿಯಾದ ಸಿದ್ದು ದಾನಪ್ಪಗೋಳ, ಪುಂಡಲಿಕ ಎಸ್. ಬಿರಾದಾರ, ದುಂಡು ಆರ್. ಪಾಟೀಲ, ಮಹಾಂತೇಶ ಬಿ. ಪಾಟೀಲ, ಎಸ್. ಆರ್. ಉಮನಬಾದಿ, ಎಂ. ಕೆ. ಹಾವಡಿ, ಎಂ. ಎಂ. ಕುರುವಿನಶೆಟ್ಟಿ, ಎ. ಎಲ್. ದೊಡಮನಿ, ಆರ್. ವಿ. ನಾಯಕ, ಆರ್. ಬಿ. ಕೋಳಿ, ಡಿ. ಎಸ್. ಗಾಯಕವಾಡ, ಕುಮಾರ ರಾಠೋಡ, ಎ. ಆರ್. ಗದ್ಯಾಳ, ಎಸ್. ಆರ್. ಬಡಚಿ, ಎಂ. ಎಚ್. ಇಚ್ಚೂರ, ಎಸ್. ಐ. ಹೆಬ್ಬಾಳಟ್ಟಿ ಮತ್ತು ಎ. ಎಚ್. ಪಾಟೀಲ ಪಾಲ್ಗೋಂಡಿದ್ದರು ಎಂದು ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿನೇಮಾಗಿಂತಲೂ ಕಡಿಮೆಯಿಲ್ಲ ಆರೋಪಿಗಳ ಬಂಧನದ ಪ್ಲ್ಯಾನ್

ಈ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ನಿಜವಾಗಿಯೂ ಸವಾಲಾಗಿತ್ತು.  ಆರೋಪಿಗಳು ವಂಚನೆಗೆ ಬಳಸಿದ್ದ ಮೊಬೈಲ್ ಸಂಖ್ಯೆಗಳಿಂದ ವಾಟ್ಸಾಪ್ ಮೂಲಕ ಮಾತ್ರ ಕರೆಗಳನ್ನು ಮಾಡಲಾಗಿದ್ದು, ಉಳಿದಂತೆ ಯಾರಿಗೂ ಸಾಮಾನ್ಯ ಕರೆ ಮಾಡಿರಲಿಲ್ಲ.  ಅದರಲ್ಲೂ ಬೃಹತ್ ಬೆಂಗಳೂರಿನಲ್ಲಿ ಆರೋಪಿಗಳ ಪತ್ತೆಗಾಗಿ ವಿಜಯಪುರ ಪೊಲೀಸರು ಸುಮಾರು ಒಂದು ವಾರಕ್ಕಿಂತಲೂ ಹೆಚ್ಚು ಕಾಲ ನಾನಾ ತಂತ್ರ ರೂಪಿಸಿದ್ದರು.  ಕೊನೆ ಸಿಕ್ಕ ಸುಳಿವೊಂದರ ಆಧಾರದ ಮೇಲೆ ಆರೋಪಿಗಳ ಮನೆ ಮೇಲೆ ಧಾಳಿ ನಡೆಸಿ ಮೂರೂ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಾಗಿರುವ ಶಂಕೆಯಿದ್ದು, ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ಕೈಗೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌