ವಿಜಯಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಂಬರುವ ದಿನಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಯೋಜನಾಬದ್ಧವಾಗಿ ಕುಡಿಯುವ ನೀರಿಗೆ ವಿಷಯದಲ್ಲಿ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸುವಂತೆ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಾಲೂಕು ಮಟ್ಟದಲ್ಲಿ ಟಾಸ್ಕ ಫೋರ್ಸ್ ಸಮಿತಿ ರಚಿಸಿದ್ದು, ಈ ಸಮಿತಿಯು ಕುಡಿಯುವ ನೀರಿನ ಸಮಸ್ಯೆ ಇದ್ದ ಗ್ರಾಮಗಳಲ್ಲಿ ತುರ್ತಾಗಿ ಟ್ಯಾಂಕರ ಮೂಲಕ ಕುಡಿಯುವ ನೀರು ಪೂರೈಸುವಂತೆಯೂ ಹಾಗೂ ಕುಡಿಯುವ ನೀರಿನ ಅಭಾವದ ಪ್ರಮಾಣವನ್ನು ಆದರಿಸಿ ಅಗತ್ಯವಿದ್ದಲ್ಲಿ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನೀರು ಪೂರೈಸಲು ಕ್ರಮ ಜರುಗಿಸುವಂತೆ ಸೂಚಿಸಿದರು. ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕಾಲುವೆಗಳಿಂದ ನೀರು ಪೋಲಾಗದಂಗತೆ ಕ್ರಮ ವಹಿಸುವಂತೆಯೂ, ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ ಇಟ್ಟುಕೊಳ್ಳಬೇಕಾದ ಹಿನ್ನೆಲೆಯಲ್ಲಿ ರೈತರು ಅನಧಿಕೃತವಾಗಿ ನೀರಾವರಿ ಪಂಪಸೆಟ್ ಅಳವಡಿಸಿದಂತೆ ನೋಡಿಕೊಳ್ಳಲು,ಪ್ರತಿ ವಾರಕ್ಕೊಮ್ಮೆ ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಸಭೆ ನಡೆಸುವ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸಾಕಷ್ಟು ದಾಸ್ತಾನು ಇಟ್ಟುಕೊಳ್ಳಬೇಕು. ಬೆಳೆ ವಿಮೆ ಕುರಿತು ರೈತರಿಗೆ ಸಮರ್ಪಕವಾದ ಮಾಹಿತಿ ಇಲ್ಲದೆ ಇರುವುದರಿಂದ ರೈತರು ವಿಮೆಗಳಿಂದ ವಂಚಿತರಾಗುತ್ತಿದ್ದು ರೈತರಲ್ಲಿ ಮನವರಿಕೆ ಮಾಡಿ ರೈತರಿಗೆ ವಿಮೆ ಕುರಿತು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಕಾಳಜಿವಹಿಸಿ ಕಾರ್ಯ ನಿರ್ವಹಿಸಬೇಕು. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಬರ ಹಿನ್ನೆಲೆಯಲ್ಲಿ ಜನರ ಕಷ್ಟ ಅರಿತು ಕಾರ್ಯನಿರ್ವಹಿಸಬೇಕು. ನರೇಗಾ ಯೋಜನೆಯಡಿ ಹೆಚ್ಚೆಚ್ಚು ಉದ್ಯೋಗ ಒದಗಿಸಬೇಕು ವಿಜಯಪುರ ನಗರದ ಎಲ್ಲ ವಾರ್ಡ್ಗಳಿಗೆ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಬೂಬಾಲನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.