ವಿಜಯಪುರ: ಆಸ್ಪತ್ರೆ ಎಂದರೆ ಕೇವಲ ಆರೋಗ್ಯ ಸುಧಾರಣz ಕೇಂದ್ರಗಳಾಗುವುದಕ್ಕಿಂತ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಕೇಂದ್ರಗಳಾಗಬೇಕು ಎಂದು ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಜನ್ಮ ದಿನೋತ್ಸವ ಮತ್ತು ದೀಪಾವಳಿ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ದೀಪೋತ್ಸವ ಹಾಗೂ ಮುತ್ಯದೆಯರಿಗೆ ಉಡಿ ತುಂಬುವ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿಯನು ಉಳಿಸುವ ಕಾಯಕವನ್ನು ಮಾಡಬೇಕು ಎನ್ನುವುದಕ್ಕೆ ನಮ್ಮ ಜೆಎಸ್‌ಎಸ್ ಆಸ್ಪತ್ರೆ ಸಾಕ್ಷಿಯಾಗಿದೆ. ಇಂದು ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಹಬ್ಬ ಹರಿದಿನಗಳ ಬಗ್ಗೆ ಮಕ್ಕಳಲ್ಲಿ ಜ್ಞಾನ ಮೂಡಿಸಿ ನಮ್ಮ ದೇಶದ ಬಗ್ಗೆ ಅಭಿಮಾನ ಉಂಟು ಮಾಡಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಜವಾಬ್ದಾರಿಯನ್ನು ಅರಿತುಕೊಂಡು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪೂಜ್ಯರ ಜನ್ಮದಿನೋತ್ಸವದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಹಾಗೂ ಡಿಶ್ಚಾರ್ಜ್ ಆಗುತ್ತಿರುವ ರೋಗಿಗಳು ಹಾಗೂ ಅವರ ಸಂಬಂಧಿಕರೊಂದಿಗೆ ಆರೋಗ್ಯ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ನಿಜಕ್ಕೂ ಮಾದರಿಯ ಕಾರ್ಯವಾಗಿದೆ. ಹಬ್ಬದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ನಾವು ಹಬ್ಬದ ಆಚರಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದು ಇದರಿಂದ ದೂರವಾಗಿದೆ. ಅವರು ಬೇಸರವನ್ನು ಹೋಗಲಾಡಿಸುತ್ತಿರುವುದು ಸ್ಮರಣೀಯಾಗಿದೆ ಎಂದು ಅವರು ಹೇಳಿದರು.
ಬೆಳಿಗ್ಗೆ ನಡೆದ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಬುದ್ಧೀಜಿ ಅವರ ಹೆಸರಿನಲ್ಲಿ ಪ್ರಾರಂಭವಾಗಿರುವ ಈ ಆಸ್ಪತ್ರೆಯು ಕಡಿಮೆ ಅವಧಿಯಲ್ಲಿ ಜನಪ್ರೀಯತೆಯನು ಪಡೆದುಕೊಳ್ಳುತ್ತಿದೆ. ಸಾರ್ವಜನಿಕರಿಗೆ ನೆರವಾಗುವ ಮೂಲಕ ಉತ್ತಮ ಸಮಾಜ ಸೇವೆಯನ್ನು ಸಹ ಮಾಡುತ್ತಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಆಸ್ಪತ್ರೆಯನ್ನೇ ಸಾರ್ವಜನಿಕರ ಬಳಿ ತೆಗೆದುಕೊಂಡು ಹೋಗಿ ನೆರವಾಗುತ್ತುದೆ. ಅದರ ಜೊತೆ ಜೊತೆಗೆ ಸನಾತನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಯತ್ನವನ್ನು ಮಾಡುತ್ತಿದೆ. ಮಠಾಧೀಶರಿಗೆ, ಸಾಧಕರಿಗೆ ಯೋಗಿಗಳಿಗೆ ನೆರವಾಗುವ ಮೂಲಕ ನಮ್ಮಲ್ಲಿ ಸಂತ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಕಾಯಕವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆಸ್ಪತ್ರೆಯ ಸೇವೆ ಇನ್ನೂ ಉತ್ತರೋತ್ತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗೂ ಸಜ್ಜನ, ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಶರಣ ಮಳಖೇಡ್ಕರ, ಸೀಮಾ ಕೋರೆ, ಶಿಕ್ಷಕಿ ಮಾಧುರಿ, ಮಾನವ ಸಂಪನ್ಮೂಲ ಅಧಿಕಾರಿ ಲೀಲಾವತಿ ಸೇರಿದಂತೆ ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂಧಿ ಉಪಸ್ಥಿತರಿದ್ದರು.