ನ. 19ರಂದು ಡಾ. ಬಿದರಿ ಚೈಲ್ಡ್ ಅಕಾಡೆಮಿ ಲೋಕಾರ್ಪಣೆ

ವಿಜಯಪುರ: ನಗರದ ಚಿಕ್ಕಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿಯವರ 40 ವರ್ಷಗಳ ವೈದ್ಯಕೀಯ ಸೇವೆಗೆ ಮತ್ತೋಂದು ಗರಿ ಸೇರ್ಪಡೆಯಾಗಲಿದ್ದು, ಎಚ್. ಟಿ. ಬಿದರಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಡಾ. ಬಿದರಿ ಚೈಲ್ಡ್ ಅಕಾಡೆಮಿ ಇದೇ ನ. 19 ರಂದು ರವಿವಾರ ಲೋಕಾರ್ಪಣೆಯಾಗಲಿದೆ.

ಅಂದು ಸಂ. 5ಕ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರು ಪಾಲ್ಗೋಳ್ಳಲಿದ್ದಾರೆ.  ಅಲ್ಲದೇ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಾಹುಲ್ ಶಿಂಧೆ, ಮಕ್ಕಳ ಹಕ್ಕುಗಳ ವಿಶ್ವ ರಾಯಭಾರಿ ವನಿತಾ ತೊರವಿ ಉಪಸ್ಥಿತರಿರಲಿದ್ದಾರೆ.

ಡಾ. ಎಲ್. ಎಚ್. ಬಿದರಿ ಅವರು ಮುಂಬರುವ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳು, ಈ ಮಕ್ಕಳಲ್ಲಿರುವ ಕಲೆಗಳನ್ನು ಗುರುತಿಸಲು ರಸಪ್ರಶ್ನೆಗಳು, ಚಿತ್ರಕಲೆ, ಪೇಂಟಿಂಗ್, ರಂಗೋಲಿ, ಪ್ರಬಂಧಗಳು, ನೃತ್ಯ, ಗಾಯನ, ಸಾಮಾನ್ಯ ಜ್ಞಾನ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವ ಯೋಜನೆ ಹೊಂದಿದ್ದಾರೆ.

ಅಲ್ಲದೆ ಪ್ರೇರಣೆ ನೀಡುವ ಮಾತುಗಳು, ಭಾಷಣ ಕಲೆ, ವಾತಾವರಣದ ಅರಿವು ಮೂಡಿಸುವುದು, ಹದಿಹರೆಯದ ಸಮಸ್ಯೆಗಳು, ಆತ್ಮಹತ್ಯೆ ಪ್ರವೃತ್ತಿಗಳು, ಪರೀಕ್ಷೆಯ ಭಯ, ವೈಫಲ್ಯತೆಗಳು, ನಾಯಕತ್ವ ಗುಣಗಳು ಇದಲ್ಲದೆ ಬೇಸಿಗೆ ರಜೆಯಲ್ಲಿ ಟೆನಿಸ್, ಈಜು, ಚೆಸ್ ಮುಂತಾದ ಆಟಗಳ ತರಬೇತಿ, ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯವಂತ ಶಿಶುಗಳ ಬೆಳವಣಿಗೆ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳುವಿಕೆ, ವಿಜಯಪುರ ನಗರದ ಸರಕಾರಿ ಶಾಲೆ ನಂ. 5ನ್ನು ದತ್ತು ತೆಗೆದುಕೊಳ್ಳುವುದು, ವಿದ್ಯಾರ್ಥಿ ವೇತನ ನೀಡುವುದು ಹೀಗೆ ಮುಂತಾದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಡಾ. ಎಲ್. ಎಚ್. ಬಿದರಿಯವರು ಇತ್ತೀಚೆಗೆ ವಿಜಯಪುರದಲ್ಲಿ ಆಯೋಜಿಸಿದ್ದ ನಾನಾ ಸ್ಪರ್ಧೆಗಳಲ್ಲಿ ಪಾಲ್ಗೋಂಡ ಮಕ್ಕಳು

ಈ ಯೋಜನೆಯಡಿಯಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ಮೊದಲ ಹಂತದಲ್ಲಿ 8 ರಿಂದ 16 ವರ್ಷದ ಮಕ್ಕಳಿಗಾಗಿ ಲಿಟಲ್ ಸಿಂಗಿಂಗ್ ಸ್ಟಾರ್ಸ್ ಗಾಯನ ಸ್ಪರ್ಧೆ ಆಯೋಜಿಸಿದ್ದಾರೆ.  ಇದರಲ್ಲಿ ಸುಮಾರು 180 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ.  ಫಿನಾಲೇ ಸುತ್ತಿನಲ್ಲಿ 16 ಮಕ್ಕಳು ತಮ್ಮ  ಗಾನಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.  ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಜೋಗಿ ಸುನಿತಾ ಅವರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ.

ಅದೇ ರೀತಿ ಆರ್ಟಬೀಟ್ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.  ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಆಯ್ದ ಅತ್ಯುತ್ತಮ ಚಿತ್ರಗಳನ್ನು ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಪ್ರದರ್ಶಿಸಲಾಗುವುದು.

ಈ ಕಲಾಕೃತಿಗಳನ್ನು ಸಾರ್ವಜನಿಕರು ಗೌರವಧನ ನೀಡಿ ಖರೀದಿಸಬಹುದಾಗಿದೆ.  ಇದಲ್ಲದೆ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುರಿತು ವಿಶೇಷ ಪ್ರಬಂಧ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗ ಸುಮಾರು 125 ಮಕ್ಕಳು ಭಾಗವಹಿಸಿ ತಮ್ಮ ಭಾಷಾಜ್ಞಾನವನ್ನು ಹಂಚಿಕೊಂಡಿದ್ದಾರೆ.  ಅಲ್ಲದೇ, ಬಿಪಿಎಲ್ ಕಾರ್ಡದಾರರಿಗಾಗಿ ಆರೋಗ್ಯವಂತ ಶಿಶುಗಳ ಸ್ಪರ್ಧೆ ಕೂಡ ಆಯೋಜಿಸಿರುವುದು ಗಮನಾರ್ಹವಾಗಿದೆ.  ಈ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ, ಪಾರಿತೋಷಕ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ರವಿವಾರ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ.

ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಜಿಲ್ಲೆಯ ಮಕ್ಕಳು, ಪಾಲಕರು ಹಾಗೂ ಸಾರ್ವಜನಿಕರು ಆಗಮಿಸಬೇಕೆಂದು ಡಾ. ಎಲ್. ಎಚ್. ಬಿದರಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌